ಬಂಟ್ವಾಳ : ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಸೋಮವಾರ ತಡರಾತ್ರಿ ನಾಡದೋಣಿಗಳ ಸಹಾಯದಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದದ್ದನ್ನು ಪತ್ತೆಹಚ್ಚಿದ ಬಂಟ್ವಾಳ ಎಎಸ್ಪಿ ಸೊನಾವಣೆ ಋಷಿಕೇಷ್ ಭಗವಾನ್ ನೇತೃತ್ವದ ಪೊಲೀಸರ ತಂಡ ಅಂದಾಜು 12 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಚಿತ ವರ್ತಮಾನದ ಹಿನ್ನೆಲೆಯಲ್ಲಿ ಬಂಟ್ವಾಳ ಎಸ್ಪಿ, ಗ್ರಾಮಾಂತರ ಠಾಣಾಧಿಕಾರಿ ಯವ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ 2 ನಾಡ ದೊಣಿಗಳ ಸಹಾಯದಿಂದ ಮರಳು ಗಾರಿಕೆ ನಡೆಸಿ ದಡದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಮರಳನ್ನು ಲೋಡು ಮಾಡುತ್ತಿದ್ದು, ಪೊಲೀಸ್ ವಾಹನವನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಟಿಪ್ಪರ್ ಲಾರಿ , 2 ಕಬ್ಬಿಣದ ದೋಣಿಗಳು , ದೋಣಿ ಚಲಾಯಿಸಲು ಬಳಸುವ 2 ಪೆಟ್ರೊಲ್ ಇಂಜಿನ್ ಹಾಗೂ ಪ್ರತಿ ದೊಣಿಯಲ್ಲಿ ಸುಮಾರು 2 ಟಿಪ್ಪರ್ ಲೋಡಿನಷ್ಟು ಮರಳು ತುಂಬಿದ್ದು ಕಂಡು ಬಂದಿದೆ.
ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ 11,72,500 ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಮೇಲಿನ ಎಲ್ಲಾ ಸೊತ್ತುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.
ಕಾರ‍್ಯಾಚರಣೆಯಲ್ಲಿ ಬಂಟ್ವಾಳ ಉಪ ವಿಬಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್ , ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಪ್ರಸನ್ನ ಎಮ್ .ಎಸ್ ಹಾಗೂ ಸಿಬ್ಬಂದಿಗಳಾದ ಸುಂದರ, ಮಾಧವ, ಬಸವರಾಜ್, ಕಿರಣ್, ಸತ್ಯ ಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು.