ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವಹೇಳನ ಬಿಜೆಪಿ ಉತ್ತರ ಮಂಡಲದಿAದ ಸುರತ್ಕಲ್ ನಲ್ಲಿ ನಡೆದ ಪ್ರತಿಭಟನೆ – ಕಹಳೆ ನ್ಯೂಸ್
ಸುರತ್ಕಲ್ : ದೇಶದ ಘನತೆವೆತ್ತ ಉಪರಾಷ್ಟ್ರಪತಿಯನ್ನು ಅಣಕಿಸಿ ಅವಹೇಳನ ಮಾಡಿರುವುದು ವ್ಯಕ್ತಿಗೆ ಅಲ್ಲ ದೇಶಕ್ಕೆ ಮಾಡಿದ ಅವಮಾನ ಎಂದು ಬಿಜೆಪಿಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತ ಪಡಿಸಿದರು.
ಸುರತ್ಕಲ್ ಬಿಜೆಪಿ ನಗರ ಉತ್ತರ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕದೇ ಹೋದಾಗ ಇಂತಹ ಅವಮಾನ ಮಾಡುತ್ತಾ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ.ಇದನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ವಿಪಕ್ಷದಲ್ಲೇ ಕುಳಿತುಕೊಳ್ಳುವ ಆಸನ ತೋರಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕಾಂಗ್ರೆಸ್ ಕಳೆದ 10 ವರ್ಷಗಳಲ್ಲಿ ಅಧಿಕಾರ ಸಿಗದೆ ಚಡಪಡಿಸುತ್ತಿದೆ. ಉತ್ತರದ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅವಹೇಳನ ಮಾಡಿ ದೇಶದ ಜನತೆಯ ಆಕ್ರೋಶಕ್ಕೆ ಕಾಂಗ್ರೆಸ್ ತುತ್ತಾಗಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ಟೀಕಿಸಿದರು. ಬಿಜೆಪಿ ಪ್ರಮುಖರಾದ ಜಗದೀಶ್ ಶೇಣವ, ಕಸ್ತೂರಿ ಪಂಜ,ಪೂಜಾ ಪೈ, ತಿಲಕ್‌ರಾಜ್ ಕೃಷ್ಣಾಪುರ, ಉಪಮೇಯರ್ ಸುನಿತಾ , ವಿಠಲ ಸಾಲಿಯಾನ್,ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ಬಿಜೆಪಿ ಉತ್ತರ ಮಂಡಲದ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.