ಸುಳ್ಯ: ತುಳು ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಗೆ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ತುಳು ಭಾಷೆಯ ಅಭಿವೃದ್ಧಿಗೆ ಅಕಾಡೆಮಿಯ ವತಿಯಿಂದ ಎಲ್ಲಾ ಪ್ರಯತ್ನವನ್ನೂ ನಡೆಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಸುಳ್ಯ ಶ್ರಿ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬಾ ವೇದಿಕೆಯಲ್ಲಿ ಮಂಗಳವಾರ ನಡೆದ ಸುಳ್ಯ ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರಗಳಲ್ಲಿ ಮಾತ್ರ ನಡೆಸದೆ ಗ್ರಾಮೀಣ ಪ್ರದೇಶದಲ್ಲಿಯೂ ತುಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬುದು ಅಕಾಡೆಮಿಯ ಆಶಯ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸಬೇಕೆಂಬ ದೃಷ್ಠಿಯಿಂದ ತಾಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಗ್ರಾಮಗಳಲ್ಲಿಯೂ ಸಮ್ಮೇಳನಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ.
ತುಳುನಾಡಿನಲ್ಲಿ ಹುಟ್ಟಿದ ಎಲ್ಲರೂ ತುಳುವರು. ತುಳು ಈ ನೆಲದ ಭಾಷೆ, ಇತರ ಭಾಷೆಗಳನ್ನು ಗೌರವಿಸುವುದರ ಜೊತೆಗೆ ಮಾತೃ ಭಾಷೆಯಾದ ತುಳುವನ್ನೂ ಪ್ರೀತಿಸಬೇಕು ಎಂದು ಅವರು ಕರೆ ನೀಡಿದರು. ಇಂದು ತುಳು ಭಾಷೆ ಮತ್ತು ಸಂಸ್ಕೃತಿ ವಿಶ್ವದಾದ್ಯಂತ ಪಸರಿಸುತ್ತಿರುವುದು ಸಂತಸದ ವಿಚಾರ. ಮುಂದಿನ ತಿಂಗಳು ದುಬಾಯಿಯಲ್ಲಿ ತುಳು ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.
ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ ಸ್ಮರಣ ಸಂಚಿಕೆ `ಸಿರಿ ಕುರಲ್’ ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಿಪ್ರಸಾದ್ ತುದಿಯಡ್ಕ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಶಾಂತ್ ರೈ ಮರುವಂಜ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು, ಸುಧಾ ನಾಗೇಶ್, ಎ.ಗೋಪಾಲ ಅಂಚನ್, ವಿಜಯ ಶೆಟ್ಟಿ ಸಾಲೆತ್ತೂರು, ವಿದ್ಯಾಶ್ರೀ.ಎನ್., ದುರ್ಗಾ ಮೆನನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪೋಷಕಾಧ್ಯಕ್ಷ ಕೆ.ಸೀತಾರಾಮ ರೈ ಸ್ವಾಗತಿಸಿ, ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ. ಪ್ರಸ್ತಾವನೆಗೈದರು.