ಕಲಬುರ್ಗಿ ಜಿಲ್ಲೆ ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿರುವ ಅರಣ್ಯ ಇಲಾಖೆ ಕಚೇರಿ ಬಳಿ ಕೊಲೆಯಾದ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಚಿತ್ತಾಪುರ ಪಟ್ಟಣದ ಹೂ ಮಾರಾಟಗಾರ ಮಹಮ್ಮದ್ ದಾವಲಸಾಬ (25) ಎಂದು ಗುರುತಿಸಲಾಗಿದೆ.
ಗುರುತು ಸಿಗದಂತೆ ಮುಖದ ಮೇಲೆ ಪೆಟ್ರೋಲ್ ಹಚ್ಚಿ ಸುಟ್ಟಿದ್ದರು. ಕೊಲೆಯಾದ ವ್ಯಕ್ತಿಯ ತಾಯಿ ಸ್ಥಳಕ್ಕೆ ಬಂದು ಕೊಲೆಯಾದ ವ್ಯಕ್ತಿಯ ಕಾಲು, ಬಟ್ಟೆ ಮತ್ತು ಶೂಗಳಿಂದ ಮೃತ ದೇಹವನ್ನು ಗುರುತಿಸಿ ಅದು ತನ್ನ ಮಗನೆಂದು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಠಾಣೆಯ ಪಿಎಸ್ ಐ ಶ್ರೀಶೈಲ್ ಅಂಬಟಿ, ಸಿಪಿಐ ಚಂದ್ರಶೇಖರ ತಿಗಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಶ್ವಾನ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಕೊಲೆಯ ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.