Saturday, November 23, 2024
ಸುದ್ದಿ

ಲೋಕ ಕಲ್ಯಾಣಾರ್ಥವಾಗಿ ಪುತ್ತಿಲ ಪರಿವಾರದಿಂದ ಶ್ರೀನಿವಾಸ ಕಲ್ಯಾಣೋತ್ಸವ : ಸಹಸ್ರಾರು ಭಕ್ತರ ಕೂಡುವಿಕೆಯಲ್ಲಿ ವೈಕುಂಠಾಧಿಪತಿಯ ಕಲ್ಯಾಣೋತ್ಸವ ಸಂಪನ್ನ – ಕಹಳೆ ನ್ಯೂಸ್

ಪುತ್ತೂರು: ಲೋಕ ಕಲ್ಯಾಣಾರ್ಥವಾಗಿ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಡಿ.24 ಮತ್ತು ಡಿ. 25 ರಂದು ನಡೆದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಭವ್ಯವಾಗಿ ನಿರ್ಮಿಸಿದ ಆಯೋಧ್ಯಾ ಮಂಟಪದಲ್ಲಿ ಶೂರರಾಜ ಪೌತ್ರನಾದ, ವಸುದೇವನ ಪುತ್ರನಾದ ಶ್ರೀ ವಶಿಷ್ಠ ಗೋತ್ರೋತ್ಪನ್ನನಾದ ಸಾಕ್ಷತ್ ಮನ್ಮಥನಾದ ರಮಾವಲ್ಲಭಾನಾದ, ಭೂವೈಕುಂಠಾಧಿಪತಿ ಶ್ರೀ ಶ್ರೀನಿವಾಸ ಹಾಗೂ ಸುಧರ್ಮರಾಜನ ಪೌತ್ರಿಯಾದ ಆಕಾಶರಾಜನ ಪುತ್ರಿಯಾದ ಶ್ರೀ ಅತ್ರಿಗೋತ್ತೋತ್ಪನ್ನಳಾದ ಶ್ರೀ ಪದ್ಮಾವತಿಯ ಕಲ್ಯಾಣೊತ್ಸವ ಗೊಧೋಳಿ ಲಗ್ನದಲ್ಲಿ ವಿಜೃಂಭಣೆಯಿಂದ ಮತ್ತು ಭಕ್ತಿ ಪ್ರದಾನದಿಂದ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಿರುಪತಿ ಶ್ರೀಕ್ಷೇತ್ರ ಮೂಲದ ಬೆಂಗಳೂರಿನ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ಕಲ್ಯಾಣೋತ್ಸವ ನಡೆಯಿತು. ಸುಪ್ರಭಾತ ಪೂಜೆಯಿಂದ ಆರಂಭಗೊಂಡ ಶ್ರೀನಿವಾಸ ಕಲ್ಯಾಣವು ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ವಿಶೇಷ ಮಹಾಪೂಜೆ ನಡೆದು, ಬಳಿಕ ಪ್ರಸಾದ ವಿತರಣೆ ಜರಗಿತು.
ಸಂಜೆ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಕುರಿತು ತಿರುಪತಿಯ ಅರ್ಚಕರು ಪ್ರವಚನ ನೀಡಿದ ಬಳಿಕ ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು.

ಶುಭಗಳಿಗೆಯಲ್ಲಿ ಸಹಸ್ರಾರು ಭಕ್ತರ ಗೋವಿಂದನ ಉದ್ಘೋಷದಲ್ಲಿ ಮಾಂಗಲ್ಯ ಧಾರಣೆ ನಡೆದು, ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಶ್ರೀನಿವಾಸ ದೇವರ ಅಶೀರ್ವಾದ ಪಡೆಯಲು ಭಕ್ತರು ಸರಥಿ ಸಾಲಿನಲ್ಲಿ ವೇದಿಕೆಗೆ ಬಂದು ವೈಕುಂಠಾಧಿಪತಿಯ ದರ್ಶನ ಪಡೆದು, ಅರ್ಚಕರಿಂದ ತಿರುಪತಿ ತಿಮ್ಮಪ್ಪನ ಕಿರೀಟ ಆಶೀರ್ವಾದ ಪಡೆದು ಪುನೀತರಾದರು.

ಇನ್ನು ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಭಾಗವಹಿಸಿ, ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅವರಿಗೆ ಪುತ್ತಿಲ ಪರಿವಾರದಿಂದ ಪುಷ್ಪವೃಷ್ಟಿ ಅರ್ಪಣೆ ಮಾಡಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಸ್ವಾಗತ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ಕಾರ್ಯದರ್ಶಿ ಗಣೇಶ್‍ಚಂದ್ರ ಭಟ್ ಮಕರಂದ, ಭಕ್ತರಿಗೆ ದೇವರ ದರುಶನ ಪಡೆಯುವಂತೆ ವಿನಂತಿಸಿದರು.

ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ 20 ನಿಮಿಷಗಳ ಕಾಲ ಬಾನೆತ್ತರದಲ್ಲಿ ಚಿಮ್ಮಿದ ಸಿಡಿಮದ್ದು ಪ್ರದರ್ಶನ ಬಣ್ಣ ಬಣ್ಣದ ಪ್ರಕಾಶವನ್ನು ಚಿಮ್ಮುತ್ತಿತ್ತು. ಭಕ್ತರು ಸಿಡಿಮದ್ದು ಪ್ರದರ್ಶನ ವೀಕ್ಷಿಸಿ ತೃಪ್ತರಾದರು.