Friday, September 20, 2024
ಸುದ್ದಿ

ನಕಾರಾತ್ಮಕ ಧೋರಣೆಯಿಂದ ಹೊರಬಂದಾಗ ಯಶಸ್ಸು ಪ್ರಾಪ್ತಿ: ಶಾರದಾ ಕೊಡೆಂಕಿರಿ – ಕಹಳೆ ನ್ಯೂಸ್

ಪುತ್ತೂರು: ಮಹಿಳೆಯರು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವುದಕ್ಕೆ ಪ್ರಯತ್ನಿಸುವುದು ಅಗತ್ಯ. ಯಾವುದೇ ಕೆಲಸವನ್ನಾದರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಜೀವನದಲ್ಲಿ ಉನ್ನತಿಯನ್ನು ಕಾಣಬಹುದು. ತನ್ನಿಂದ ಸಾಧ್ಯವಾಗದು ಎಂಬ ನಕಾರಾತ್ಮಕ ಧೋರಣೆಯಿಂದ ಪ್ರತಿಯೊಬ್ಬರೂ ಹೊರಬಂದು, ಸಕಾರಾತ್ಮಕ ಚಿಂತನೆಗಳನ್ನು ಒಡಮೂಡಿಸಿಕೊಳ್ಳಬೇಕು ಎಂದು ಪುತ್ತೂರಿನ ಜ್ಞಾನಗಂಗಾ ಪ್ರಕಾಶನದ ಮಾಲಕಿ, ಲೇಖಕಿ ಶಾರದಾ ಕೊಡೆಂಕಿರಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುವ ಜನ ಮನ ಸರಣಿ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ತನ್ನ ಅನುಭವವನ್ನು ಹಂಚಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳು ದೂರದರ್ಶನ, ಮೊಬೈನಂತಹ ವಿಷಯಗಳೆಡೆಗೆ ಹೆಚ್ಚು ಆಕರ್ಷಿತರಾಗದೆ ಸಾಧನೆಯತ್ತ ಗಮನ ಹರಿಸಬೇಕು. ಹೆತ್ತವರಿಗೆ, ಶಿಕ್ಷಕರಿಗೆ ಗೌರವ ತರುವಂತಹ ಕಾರ್ಯಗಳನ್ನು ಸಾಕಾರಗೊಳಿಸಬೇಕು. ನಮ್ಮನ್ನು ಪೊರೆಯುವುದಕ್ಕೆ ದೇವರಿದ್ದಾನೆ ಎಂಬ ಭಾವವಿದ್ದಾಗ ಆತಂಕಗಳು ದೂರವಾಗುತ್ತವೆ. ಸಾಗಬೇಕಾದ ದಾರಿ ಅನಾವರಣಗೊಳ್ಳುತ್ತದೆ. ಎಷ್ಟೋ ಬಾರಿ ಬದುಕಿನಲ್ಲಿ ದೈವಿಕ ಶಕ್ತಿಯ ಪರಿಣಾಮಗಳ ಅನುಭವ ದೊರಕಿದೆ ಎಂದು ನುಡಿದರು.

ಜಾಹೀರಾತು

ಸುಮಾರು ನಲವತ್ತೈದು ವರ್ಷಗಳಿಂದ ಪುಸ್ತಕ ವ್ಯವಹಾರವನ್ನು ಮಾಡುತ್ತಾ ಬಂದಿದ್ದು, ಈಗೀಗ ಪುಸ್ತಕ ಪ್ರಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲವು ಮೊಬೈಲ್ ನಲ್ಲಿ ಪುಸ್ತಕಗಳ ಪುಟಗಳನ್ನು ಚಿತ್ರ ತೆಗೆದು ಒಯ್ಯುವುದಿದೆ. ಹಿಂದಿನ ಕಾಲಕ್ಕೆ ಹೋಲಿಸಿದಾಗಲಿಂದಿನವರ ಓದಿನ ಬಗೆಗೆ ಆತಂಕ ಮೂಡುತ್ತದೆ ಎಂದರಲ್ಲದೆ ತಾನು ವಿಶೇಷವಾಗಿ ಮನೆಮದ್ದಿನ ಕುರಿತಾಗಿ ಪುಸ್ತಕ ರೂಪಿಸಿದ್ದು, ಅದಕ್ಕಾಗಿ ಅನೇಕ ಊರುಗಳಿಗೆ, ಪ್ರದೇಶಗಳಿಗೆ ಬೇಟಿ ಕೊಟ್ಟದ್ದಿದೆ ಎಂದರು.

ಗರಿಕೆ, ಒಂದೆಲಗದ ಅವೆಷ್ಟೋ ನೈಸರ್ಗಿಕ ಔಷಧೀಯ ವಸ್ತು ವಿಷಯಗಳು ನಮ್ಮ ಮನೆಯಂಗಳದಲ್ಲೇ ಇವೆ. ಆದರೆ ಆಧುನಿಕ ಪದ್ಧತಿಗೆ ಮಾರುಹೋಗಿ ನಮ್ಮ ಜತೆಗೇ ಇರುವ ಉಪಯುಕ್ತ ವಿಚಾರಗಳೆಡೆಗೆ ಉಪೇಕ್ಷೆ ಮೂಡುತ್ತಿದೆ. ಮನೆಮದ್ದಿನಿಂದ ದೊಡ್ಡ ದೊಡ್ಡ ರೋಗಗಳೂ ವಾಸಿಯಾದ ಎಷ್ಟೋ ಉದಾಹರಣೆಗಳಿವೆ. ಹಾಗಾಗಿ ತಪ್ಪು ಕಲ್ಪನೆಯಿಂದ ಹೊರಬಂದು ಪ್ರಕೃತಿ ದತ್ತ ಸಂಗತಿಗಳನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ, ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯರಾದ ರಾಧಿಕಾ ಕಾನತ್ತಡ್ಕ, ಸುಶ್ಮಿತಾ ಜೆ, ಪೂಜಾ ಪಕ್ಕಳ ಉಪಸ್ಥಿತರಿದ್ದರು.

ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ಉಪನ್ಯಾಸಕಿಯರಾದ ಭವ್ಯ ಪಿ.ಆರ್ ನಿಡ್ಪಳ್ಳಿ ಸ್ವಾಗತಿಸಿ, ಪ್ರಜ್ಞಾಬಾರ್ಯ ವಂದಿಸಿದರು. ವಿದ್ಯಾರ್ಥಿ ಶಿವಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.