Sunday, November 24, 2024
ಸುದ್ದಿ

ಪಾದಚಾರಿ ಯುವತಿಗೆ ಕಾರು ಡಿಕ್ಕಿ : ಯುವತಿ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ: ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆ ನಡೆದಿದೆ.

ಬಿಸಿರೋಡಿನ ಕೈಕಂಬ ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಾತ್ರಿ 8 ಗಂಟೆ ವೇಳೆ ಅಪಘಾತ ನಡೆದಿದ್ದು, ಸ್ಥಳೀಯ ನಿವಾಸಿ ಚೈತ್ರ (22 ) ಮೃತಪಟ್ಟ ಯುವತಿ. ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ತಾಯಿ ಜೊತೆಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಸ್ನೇಹಿತೆಯೋರ್ವಳ ಮದುವೆಯ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿಈಕೆ ಕೆಲಸಕ್ಕೆ ರಜೆ ಪಡೆದುಕೊಂಡು ಸಂಜೆ ವೇಳೆ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಯಿ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಸ್ವಿಪ್ಟ್ ಕಾರು ಇವಳಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇವಳನ್ನು ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಟ್ರಾಫಿಕ್ ಎ.ಎಸ್.ಐ.ಸುರೇಶ್ ಪಡಾರ್, ಹಾಗೂ ಹೆಚ್.ಸಿ.ರಮೇಶ್ ಅವರು ಖಾಸಗಿ ವಾಹನದ ಮೂಲಕ ಗಾಯಳು ಚೈತ್ರಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಭೀರವಾಗಿ ಗಾಯಗೊಂಡಿರುವ ಈಕೆ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಆದರೆ ಮಧ್ಯ ರಾತ್ರಿ ಸುಮಾರು 1 ಗಂಟೆಗೆ ಈಕೆ ಮೃತಪಟ್ಟ ಬಗ್ಗೆ ವೈದ್ಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾದಾಚಾರಿಗೆ ಡಿಕ್ಕಿ ಹೊಡೆದ ಕಾರು ಬಳಿಕ ನಿಯಂತ್ರಣ ಕಳೆದುಕೊಂಡು ಅಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು ,ಮನೆಯೊಂದರ ಕಾಂಪೌಂಡ್ ಗೆ ಕೂಡ ಗುದ್ದಿ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾರು ಚಾಲಕ ಹಾಗೂ ಇವನ ಜೊತೆ ಇದ್ದ ಮೂವರು ಸಹಪ್ರಯಾಣಿಕ ಪರಾರಿಯಾಗಿದ್ದು, ಮಲ್ಲೂರು ಕಡೆ ಹೋಗುವವರು ಎಂದು ಹೇಳಲಾಗಿದೆ. ಈ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೈತ್ರ ಖ್ಯಾತ ಮೇಕಪ್ ಆರ್ಟಿಸ್ಟ್ ದಿ. ಭಾಸ್ಕರ್ ಆಚಾರ್ಯ ಅವರ ಮಗಳಾಗಿದ್ದು, ಮಂಗಳೂರಿನ ಪ್ರಸಿದ್ದ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಚೈತ್ರಳಿಗೆ ನಿಶ್ಚಿತಾರ್ಥ ನಡೆದು, ಮಾ.3 ರಂದು ಕೊಡ್ಯಡ್ಕದ ಯುವಕನ ಜೊತೆ ಮದುವೆಯೂ ನಿಗದಿಯಾಗಿತ್ತು. ಆದರೆ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ಯುವತಿಯನ್ನು ಕಾರೊಂದು ಮಸಣ ಸೇರುವಂತೆ ಮಾಡಿದೆ.

ಗಾಂಜಾ ಸೇವಸಿದ್ದಾರಾ..?
ಗಾಂಜಾ ಸೇವನೆ ಮಾಡಿ ಕಾರು ಓಡಿಸುತ್ತಿದ್ದುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಈ ಬಗ್ಗೆ ಪೋಲೀಸರಿಗೆ ಸಂಬಂಧಿಕರು ದೂರು ನೀಡಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.