ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಲಪಂಥೀಯ ಹಿಂದು ಸಂಘಟನೆಗಳ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದು, ತ್ರಿವಳಿ ತಲಾಕ್ ಅನ್ನು ಸ್ವಾಗತಿಸಿದ್ದ ಬಹುತೇಕರು ಇಂದು ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದ ತೀರ್ಪಿನ ಬಳಿಕ ಬೀದಿಗಿಳಿದಿದ್ದಾರೆ ಎಂದು ಟೀಕಿಸಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಆದರೆ, ನೀವೆಲ್ಲರೂ ಇದು ನಮ್ಮ ಸಂಪ್ರದಾಯ ಎನ್ನುತ್ತಿದ್ದೀರಿ. ತ್ರಿವಳಿ ತಲಾಕ್ ಕೂಡ ಅವರ ಸಂಪ್ರದಾಯವೇ ಆಗಿತ್ತಲ್ಲವೆ? ಅದನ್ನು ರದ್ದುಗೊಳಿಸಿದಾಗ ಎಲ್ಲರೂ ಶ್ಲಾಘಿಸಿದ್ದರು. ಆದರೆ, ಅದೇ ಹಿಂದುಗಳು ಇದೀಗ ಬೀದಿಗಿಳಿದಿದ್ದಾರೆ ಎಂದಿದ್ದಾರೆ.
ಈ ಹೋರಾಟವು ಹಿಂದು ಪ್ರಗತಿಶೀಲರು ಮತ್ತು ಸಂಪ್ರದಾಯವಾದಿಗಳ ನಡುವಿನದ್ದು. ಎಲ್ಲ ಹಿಂದುಗಳು ಸಮಾನರು ಅದಕ್ಕಾಗಿ ಜಾತಿ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಪ್ರಗತಿಶೀಲರು ಹೇಳುತ್ತಾರೆ. ಯಾಕೆಂದರೆ ಇಂದು ಬ್ರಾಹ್ಮಣರು ಕೇವಲ ಬೌದ್ಧಿಕರಾಗಿ ಉಳಿದಿಲ್ಲ. ಬದಲಾಗಿ ಸಿನಿಮಾ, ಉದ್ಯಮ ಸೇರಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಾತಿ ಎಂಬುದು ಜನ್ಮದಿಂದಲೇ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲಿ ಬರೆದಿದ್ದಾರೆ? ಶಾಸ್ತ್ರಗಳನ್ನು ಕೂಡ ತಿದ್ದುಪಡಿ ಮಾಡಬಹುದು ಎಂದು ತಿಳಿಸಿದ್ದಾರೆ.
10 ರಿಂದ 50 ವರ್ಷದೊಳಗಿನ ಮಹಿಳಾ ಭಕ್ತರನ್ನು ದೇಗುಲ ಪ್ರವೇಶಕ್ಕೆ ನಿಷೇಧ ಹೇರಿ ಹಿಂದು ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಅವರ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಕೇರಳದಲ್ಲಿ ಅಯ್ಯಪ್ಪ ಭಕ್ತರು ನಡೆಸುತ್ತಿರುವ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶಬರಿಮಲೆಗೆ ಪ್ರವೇಶಿಸುವ ದ್ವಾರಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇರಳ ಸರ್ಕಾರವು ಮುನ್ನೆಚ್ಚರಿಕೆ ದೃಷ್ಟಿಯಿಂದಾಗಿ ನಿಲಕ್ಕಲ್ ಸುತ್ತಮುತ್ತ ಬಿಗಿ ಭದ್ರತೆಯನ್ನು ನಿಯೋಜಿಸಿದೆ.