Thursday, January 23, 2025
ಸುದ್ದಿ

ಪುತ್ತಿಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮಸಭೆ : “ಶಾಲೆಗಳ ಸಮಸ್ಯೆಯನ್ನ ನೀಗಿಸುತ್ತೇವೆ” ಪಿಡಿಒ ಭೀಮ ನಾಯಕ್ ಬಿ. ಭರವಸೆ – ಕಹಳೆನ್ಯೂಸ್

ಮೂಡುಬಿದಿರೆ : ಶಾಲೆಗೆ ಸಂಬಂಧಿಸಿದ ದಾಖಲೆಪತ್ರಗಳು ಸರಿಯಾಗಿದ್ದರೆ ಗಾಂಧಿ ಗ್ರಾಮ ಪುರಸ್ಕಾರದಲ್ಲಿ ಬರುವ ಅನುದಾನದಿಂದ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಶಾಲೆಗಳಲ್ಲಿ ಕೊರತೆ ಇರುವ ಆಟದ ಮೈದಾನ, ಆವರಣ ಗೋಡೆ ನಿರ್ಮಾಣ, ಶೌಚಾಲಯ, ಮತ್ತು ನೀರಿನ ಸಮಸ್ಯೆಯನ್ನು ನೀಗಿಸುತ್ತೇವೆ ಎಂದು ಪಿಡಿಒ ಭೀಮ ನಾಯಕ್ ಬಿ. ಭರವಸೆಯನ್ನು ನೀಡಿದರು.

ಅವರು ಪಂಚಾಯತ್ ಅಧ್ಯಕ್ಷೆ ರಾಧಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿ ಶರಿಫಾ ರಿಫಾನಾ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಪುತ್ತಿಗೆ, ಹಂಡೇಲು, ಕುಂಗೂರು ಶಾಲೆ ವಿದ್ಯಾರ್ಥಿಗಳು ಶಾಲೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ ಆದ್ಯತೆಯ ಮೇರೆಗೆ ಸಮಸ್ಯೆಗಳನ್ನು ನೀಗಿಸುವುದಾಗಿ ತಿಳಿಸಿದ ಅವರು ಹಂಡೇಲು ಮತ್ತು ಕುಂಗೂರು ಶಾಲೆಗಳಿಗೆ ಶೌಚಾಲಯಕ್ಕೆ ಮಂಜೂರು ಆಗಿದೆ ಎಂದರು. ಶಿಕ್ಷಕ ದೊರೆ ಸ್ವಾಮಿ ಮಕ್ಕಳಿಗಿರುವ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತಿಗೆ ವಲಯದ ಅಂಗನವಾಡಿ ಮೇಲ್ವೀಚಾರಕಿ ಕಾತ್ಯಾಯಿನಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಲಾಗುತ್ತದೆ. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಶಾಲೆಯಲ್ಲಿ, ಮನೆಯಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ಲೈಂಗಿಕ ದೌರ್ಜನ್ಯಗಳು ಆದಾಗ ಹೆದರಿಕೆ ಮತ್ತು ನಾಚಿಕೆಯಿಂದ ಮುಚ್ಚಿಡಬಾರದು. ನಿಮ್ಮ ಹೆತ್ತವರ ಮತ್ತು ಶಿಕ್ಷಕರ ಗಮನಕ್ಕೆ ತರಬೇಕು ಎಂದು ಹೇಳಿದರು. ಆರೋಗ್ಯ ಸಹಾಯಕಿ ವಿದ್ಯಾ ಸಿ.ಹೆಚ್, ಪಂಚಾಯತ್ ಸದಸ್ಯ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ಭಾಗವಹಿಸಿದರು.