ಭಜನೆಯಿಂದ ಸನಾತನ ಸಂಸ್ಕೃತಿಯ ಗತ ವೈಭವ ಅನಾವರಣ : ಯಶ್ಪಾಲ್ ಎ. ಸುವರ್ಣ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು : ನೂತನ ಪದಾಧಿಕಾರಿಗಳ ಪದಗ್ರಹಣ
ಭಜನಾ ಮಂಡಳಿಗಳು ಮಾದರಿ ಸಂಘಟನೆಯ ಮೂಲಕ ಏಕತೆಯನ್ನು ಸಾರುವ ಶೃದ್ಧಾ ಕೇಂದ್ರಗಳಾಗಿವೆ. ಭಜನೆಯಲ್ಲಿ ವಿಭಜನೆ ಇಲ್ಲ. ಭಜನೆಯಿಂದ ಸನಾತನ ಸಂಸ್ಕೃತಿಯ ಗತ ವೈಭವ ಅನಾವರಣಗೊಂಡಂತಾಗಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಬಲಪಾಡಿ ‘ಪ್ರಗತಿ ಸೌಧ’ ಸಭಾಂಗಣದಲ್ಲಿ ನಡೆದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ನಡೆಯುವ ಯಾವುದೇ ಧಾರ್ಮಿಕ ಸಮಾರಂಭಗಳಲ್ಲಿ ಭಜನಾ ಮಂಡಳಿಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ತಾಲೂಕಿನ ಅನೇಕ ಪರಿಣಿತ ಭಜನಾ ತಂಡಗಳು ವಿಶಿಷ್ಟ ಸಾಧನೆಗೈದು ಉಡುಪಿಗೆ ಹೆಮ್ಮೆ ತಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿವಿಧ ಕಾರ್ಯ ಚಟುವಟಿಕೆಗಳೊಂದಿಗೆ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿದೆ.
ನಮ್ಮೆಲ್ಲರ ಎಷ್ಟೋ ವರ್ಷಗಳ ಕನಸು ನನಸಾಗುವ ಶುಭ ದಿನ ಸನ್ನಿಹಿತವಾಗಿದೆ. ಜ.22ರಂದು ಅಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನೆಯ ಪರ್ವಕಾಲದಲ್ಲಿ ಎಲ್ಲಾ ಭಜನಾ ಮಂದಿರಗಳಲ್ಲಿ ಭಜನಾ ಸೇವೆಯನ್ನು ಹಮ್ಮಿಕೊಳ್ಳುವ ಜೊತೆಗೆ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಪುಣ್ಯ ಕ್ಷಣಗಳನ್ನು ನೆನೆದು ಸಂಜೆ ಪ್ರತೀ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಣೆಯ ರೀತಿ ಸಂಭ್ರಮಿಸಿ ಅವಿಸ್ಮರಣೀಯಗೊಳಿಸಬೇಕು ಎಂಬ ಕೋರಿಕೆಯ ಸಹಿತ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹದಿಂದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಾರ್ಥಕ ಚಟುವಟಿಕೆಗಳೊಂದಿಗೆ ಯಶಸ್ಸಿನ ಪಥದಲ್ಲಿ ಮುನ್ನಡೆದು ಸರ್ವಾಂಗೀಣ ಅಭಿವೃದ್ಧಿ ಹೊಂದುವಂತಾಗಲಿ ಎಂದು ಶುಭ ಹಾರೈಸಿದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿಯವರು ನೂತನ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿಯವರಿಗೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಲಾಲ್ ರವರು ನೂತನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಯವರಿಗೆ ಅಧಿಕಾರ ಹಸ್ತಾoತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾರ್ಯ ಪದ್ಧತಿ, ಕಾರ್ಯಕ್ರಮಗಳು ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ತಾಲೂಕು ಭಜನಾ ಪರಿಷತ್ತಿನ ನೂತನ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ ಎಲ್ಲರ ಸಂಘಟಿತ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಲು ಸಾಧ್ಯ. ತಾಲೂಕು ಭಜನಾ ಪರಿಷತ್ತಿಗೆ ಎಲ್ಲಾ 8 ವಲಯಗಳ ವ್ಯಾಪ್ತಿಯ ಭಜನಾ ಮಂಡಳಿಗಳನ್ನು ಸೇರ್ಪಡೆಗೊಳಿಸುವ ಜೊತೆಗೆ ಭಜನಾ ಪರಿಷತ್ತನ್ನು ಇನ್ನಷ್ಟು ಸದೃಢವಾಗಿ ಕಟ್ಟಿ ಬೆಳೆಸಲು ಎಲ್ಲರ ಸಹಕಾರ ಅತೀ ಅಗತ್ಯ ಎಂದರು.
ಭಜನಾ ಪರಿಷತ್ತಿನ ನೂತನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಶ್ರೀ ಕ್ಷೇತ್ರದಿಂದ ಹಲವಾರು ಭಜನಾ ಮಂದಿರಗಳು ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಬಹಳಷ್ಟು ಸಹಾಯಧನ ದೊರೆತಿದೆ. ಭಜನಾ ಪರಿಷತ್ತಿನ ಚೌಕಟ್ಟಿನೊಳಗೆ ಭಜನೆಯನ್ನು ಇನ್ನಷ್ಟು ಪ್ರಚಲಿತಗೊಳಿಸಲು ಗರಿಷ್ಠ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಭಜನಾ ಪರಿಷತ್ತಾನ್ನಾಗಿ ರೂಪಿಸಲು ಎಲ್ಲ ಪದಾಧಿಕಾರಿಗಳು ಮತ್ತು ಭಜನಾ ಮಂಡಳಿಗಳ ಸಹಕಾರ ಅತ್ಯವಶ್ಯಕ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್ ಮಾತನಾಡಿ, ತಾಲೂಕು ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಆಯ್ಕೆ ಪಾರದರ್ಶಕವಾಗಿ ನಡೆದಿದೆ. ಎಲ್ಲ ಪದಾಧಿಕಾರಿಗಳು ಮತ್ತು ವಲಯಗಳ ಸಂಯೋಜಕರು ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಭಜನಾ ಮಂಡಳಿಗಳ ಸಹಕಾರದೊಂದಿಗೆ ಭಜನಾ ಪರಿಷತ್ತನ್ನು ಇನ್ನಷ್ಟು ಸಕ್ರಿಯಗೊಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ತಾಲೂಕು ಭಜನಾ ಪರಿಷತ್ತಿನ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಲಾಲ್ ಮತ್ತು ನೂತನ ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ಶುಭ ಹಾರೈಸಿದರು.
ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿದ ನಿಕಟಪೂರ್ವ ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಚೇರ್ಕಾಡಿ ಮಾತನಾಡಿ ಕಳೆದ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಭಜನಾ ಸಮಾವೇಶ, ಕಮ್ಮಟದಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ. ಮುಂದಿನ ಅವಧಿಯಲ್ಲಿ ಭಜನಾ ಮಂಡಳಿಗಳನ್ನು ಸಂಘಟಿಸುವ ಜೊತೆಗೆ ಗರಿಷ್ಠ ಕಾರ್ಯಕ್ರಮಗಳೊಂದಿಗೆ ಭಜನಾ ಪರಿಷತ್ತನ್ನು ಮಾದರಿಯಾಗಿ ಮುನ್ನಡೆಸುವಲ್ಲಿ ನೂತನ ಪದಾಧಿಕಾರಿಗಳ ತಂಡ ಯಶಸ್ವಿಯಾಗಲಿ ಎಂದರು .
ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಪರ್ವಕಾಲದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಜಂಟಿ ಆಶ್ರಯದಲ್ಲಿ ಜ.15ರಿಂದ ಜ.21 ರವರೆಗೆ ಶ್ರೀ ವೀರಭದ್ರ ದೇವಸ್ಥಾನ ಹಿರಿಯಡಕದಲ್ಲಿ ಸಂಜೆ ಗಂಟೆ 5.00ರಿಂದ 7ರ ತನಕ ಹಿರಿಯ ವಿದ್ವಾಂಸ ಡಾ! ಶಾಂತರಾಮ ಪ್ರಭು ನಿಟ್ಟೂರು ಇವರಿಂದ ನಡೆಯುವ ‘ಶ್ರೀರಾಮ ಕಥಾ ಸಪ್ತಾಹ’ ಪ್ರವಚನದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ತಾಲೂಕು ಭಜನಾ ಪರಿಷತ್ತಿನ ಉಪಾಧ್ಯಕ್ಷರಾದ ವಜ್ರಾಕ್ಷಿ ಪಿ. ದಾಸ್, ಸುಮಿತ್ರಾ ನಾಯ್ಕ್ ಪೆರಂಪಳ್ಳಿ , ಜೊತೆ ಕಾರ್ಯದರ್ಶಿ ಸತೀಶ್ ಕುಮಾರ್ ಕೇದಾರ್, ವಲಯ ಸಂಯೋಜಕರಾದ ಯಶೋಧ ಹೇರೂರು, ಮಾಯಾ ಕಾಮತ್ ಮಣಿಪಾಲ, ಸಂಧ್ಯಾ ಕಾಮತ್ ಹಿರಿಯಡಕ ಹಾಗೂ ವಲಯಗಳ ಸಹ ಸಂಯೋಜಕರು, ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಭಜನಾ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಾಮ ಎಮ್ ಸ್ವಾಗತಿಸಿದರು. ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.