Saturday, November 23, 2024
ದಕ್ಷಿಣ ಕನ್ನಡಸುದ್ದಿ

ವಾಯುಭಾರ ಕುಸಿತ – ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆ ; ಇಂದು “ಎಲ್ಲೋ ಅಲರ್ಟ್‌’ – ಕಹಳೆ ನ್ಯೂಸ್

ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಉತ್ತಮ ಮಳೆ ಸುರಿದಿದೆ.

ಮಧ್ಯರಾತ್ರಿ ಮತ್ತು ಬೆಳಗ್ಗಿನ ಜಾವದಿಂದ ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗಿದೆ. ಬಳಿಕ ದಿನವಿಡೀ ಜಿಲ್ಲೆಯಲ್ಲಿ ಮೋಡದಿಂದ ಕೂಡಿದ ವಾತಾವರಣ ಇತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಸಮುದ್ರ ಮಟ್ಟದಲ್ಲಿ ವಾಯಭಾರ ಕುಸಿತ ಉಂಟಾಗಿದ್ದು, ಆಗ್ನೇಯ ಅರಬಿ ಸಮುದ್ರದ ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದಲ್ಲಿ ಸುಳಿಗಾಳಿ ಸೃಷ್ಟಿಯಾಗಿದೆ. ಇದರಿಂದಾಗಿ ನಿಮ್ನ ಒತ್ತಡ ನಿರ್ಮಾಣ ಆಗಿದೆ. ಪರಿಣಾಮ ಕರಾವಳಿ ಭಾಗದಲ್ಲಿ ಬುಧವಾರ ಮಳೆಯಾಗಿದೆ.

ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ತಾಲೂಕಿನಾದ್ಯಂತ ಬೆಳಗ್ಗೆ ಮಳೆಯಾಗಿದೆ. ಉಳಿದಂತೆ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ. ಮಳೆಯ ಪರಿಣಾಮ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ವಿದ್ಯುತ್‌ ಕೈಕೊಟ್ಟಿತ್ತು.

ಬೆಳೆಗಳಿಗೂ ಹಾನಿ
“ಗ್ರಾಮೀಣ ಭಾಗದ ಹಲವು ಮನೆಗಳಲ್ಲಿ ಕೊçಲಿನ ಅಡಿಕೆ ಅಂಗಳದಲ್ಲೇ ಇದೆ. ಸಾಮಾನ್ಯವಾಗಿ ಜನವರಿಯಲ್ಲಿ ಮಳೆ ಬರಲಿಕ್ಕಿಲ್ಲ ಎಂದು ಹೆಚ್ಚಿನವರು ರಾಶಿ ಮಾಡಿರಲಿಲ್ಲ. ತಡ ರಾತ್ರಿ ದಿಢೀರನೆ ಸುರಿದ ಮಳೆಗೆ ಒಣಗಿದ ಅಡಿಕೆ ಒದ್ದೆಯಾಗಿದೆ. ಇದರಿಂದ ಅಡಿಕೆಯ ಗುಣಮಟ್ಟವೂ ಹಾಳಾಗುತ್ತದೆ. ಅಡಿಕೆ ಮರದಲ್ಲಿ ಸದ್ಯ ಸಿಂಗಾರ ಬೆಳವಣಿಗೆ ಹಂತದಲ್ಲಿರುವುದರಿಂದ ಅದಕ್ಕೆ ಹಾಳೆ ಮುಚ್ಚಿದೆ. ಬಳಿಕ ಬಲಿತು ಅಡಿಕೆಯಾಗುವ ಸಂದರ್ಭದಲ್ಲಿ ಮಳೆಯಾದರೆ ಗೊನೆಗೆ ಹಾನಿ ಉಂಟಾಗಬಹುದು. ಇನ್ನು ಕಾಳು ಮೆಣಸು ಬಳ್ಳಿಯಲ್ಲಿ ನೀರು ನಿಂತು, ಬಿಸಿಲು ಕಾಯುವಾಗ ಬೆಂದಂತಾಗುತ್ತದೆ. ಇದರಿಂದ ಉತ್ತಮ ಇಳುವರಿ ಸಾಧ್ಯವಿಲ್ಲ. ಜನವರಿಯಲ್ಲಿ ಸಾಮಾನ್ಯವಾಗಿ ಮಳೆ ಬರುವುದು ಕಡಿಮೆ’ ಎನ್ನುತ್ತಾರೆ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರಿನ ರೈತರಾದ ಎಂ. ಸುಬ್ರಹ್ಮಣ್ಯ ಭಟ್‌.

ಅಕಾಲಿಕ ಮಳೆಯಲ್ಲ
“ವಾಡಿಕೆಯಂತೆ ಹಿಂಗಾರು ಮುಗಿದಿದೆ. ಚಳಿಗಾಲ ಆರಂಭವಾದರೂ ಇನ್ನೂ ಕೆಲ ಕಡೆ ಹಿಂಗಾರು ಮಳೆ ಮುಂದುವರೆಯಲಿದೆ. ವಾಯುಭಾರ ಕುಸಿತದ ಪರಿಣಾಮ ಕರಾವಳಿ ಭಾಗದಲ್ಲಿ ಮಳೆಯಾಗಿದೆ. ಇದೇನು ಅಕಾಲಿಕ ಮಳೆಯಲ್ಲ. ಈ ಹಿಂದೆಯೂ ಜನವರಿಯಲ್ಲಿ ಮಳೆಯಾಗಿದೆ. ವಾಯುಭಾರ ಕುಸಿತ ಕಾರಣದಿಂದಾಗಿ ಪೂರ್ವ ದಿಕ್ಕಿಗೆ ಮೋಡ ಚಲನೆಯಾಗುತ್ತಿದೆ. ಇದು ಮಳೆಗೆ ಕಾರಣ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮುಂದಿನ ಮೂರ್‍ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಪ್ರಸಾದ್‌.

ಇಂದು “ಎಲ್ಲೋ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಜ. 4ರಂದು “ಎಲ್ಲೋ ಅಲರ್ಟ್‌’ ಘೊಷಿಸಲಾಗಿದೆ. ಈ ವೇಳೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಬಹುದು. ಇದರಿಂದಾಗಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ ಇಳಿಕೆಯಾಗಬಹುದು ಎನ್ನುತ್ತಾರೆ ಹವಾಮಾನ ಇಲಾಖೆ ತಜ್ಞರು.