Friday, September 20, 2024
ಸುದ್ದಿ

ಹತ್ತು ದಿನದ ಸಂಭ್ರಮದ ದಸರಾ ಹಬ್ಬದ ವಿಶೇಷ ಪೂಜೆ ಆಯುಧ ಪೂಜೆ – ಕಹಳೆ ನ್ಯೂಸ್

ಭಾರತದಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಗುವ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಹಿಂದೂಗಳಲ್ಲಿ ಕ್ರಿಯಾತ್ಮಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿ ಭಾರೀ ಮಹತ್ವ ಪಡೆದಿದೆ. ಈ ಹತ್ತು ದಿನಗಳ ಸಂಭ್ರಮದ ದಸರಾ ಹಬ್ಬದಂದು ಹಲವಾರು ಪೂಜೆ ಪುನಸ್ಕಾರಗಳಿದ್ದು ಇದರಲ್ಲಿ ಆಯುಧ ಪೂಜೆಯು ಒಂದು. ಆಯುಧ ಪೂಜೆ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ.

ನವರಾತ್ರಿಯ ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳ್ನು ಪೂಜಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ದೇವಾನು ದೇವತೆಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ದುರ್ಗಾದೇವಿ ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯಿದೆ. ಮಹಿಷಾಸುರನನ್ನು ಸಂಹರಿಸಿದ ದೇವಿ ಮುಂದಿನ ದಿನಗಳಲ್ಲಿ ತನ್ನ ಆಯುಧಗಳನ್ನು ಶುದ್ಧಗೊಳಿಸದಲೆಂದು ನಂಬಿಕೆಯಿದೆ.

ಆಯುಧ ಪೂಜೆಯ ದಿನದಂದು ಬೀದಿಬದಿಯ ಸೈಕಲ್ ಶಾಪ್‌ನಿಂದ ಹಿಡಿದು ಚಿನ್ನಾಭರಣ ತಯಾರಿಸುವ ಅಕ್ಕಸಾಲಿಗವರೆಗೂ ಈ ಒಂದು ದಿನ ದೈನಂದಿನ ಕೆಲಸಕ್ಕೆ ಸಲಾಂ ಹೊಡೆದು ತಮ್ಮ ಜೀವನಕ್ಕೆ ಆಧಾರವಾಗಿರುವ ಸಲಕರಣೆಗಳನ್ನು ಪೂಜಿಸುತ್ತಾರೆ. ಫ್ಯಾಕ್ಟರಿ, ಸಾಫ್ಟ್ ವೇರ್ ಕಚೇರಿ, ಅಂಗಡಿ ಮುಂಗಟ್ಟು, ಮನೆಮನೆಗಳಲ್ಲಿ ಹಬ್ಬದ ವಾತಾವರಣ, ತಮ್ಮನ್ನು ಕಾಯುವ ದೇವವನ್ನು ಪೂಜಿಸುವ ತವಕ ಎಲ್ಲೆಂದರಲ್ಲಿ ಕಂಡುಬರುತ್ತದೆ. ದೇಶಕ್ಕೆ ಅನ್ನ ನೀಡುವ ಉಳುವ ಯೋಗಿ ತನ್ನ ನೇಗಿಲಿಗೆ ಪೂಜೆ ಸಲ್ಲಿಸುವುದನ್ನು ಮರೆಯುವುದಿಲ್ಲ.

ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಸ್ಕ್ರೂ ಡ್ರೈವರಿಂದ ಹಿಡಿದು, ಸೈಕಲ್ಲು, ಬೈಕು, ಕಾರು ಮೊದಲಾದವುಗಳನ್ನು ತೊಳೆದು, ಕಂಪ್ಯೂಟರು, ಫ್ರಿಜ್, ಟಿವಿಗಳನ್ನು ಒರೆಸಿ ಸುಣ್ಣದ ಪಟ್ಟಿ ಬಳಿದು, ಅರಿಷಿಣ ಕುಂಕುಮ, ಹೂವೇರಿಸಿ ಊದುಬತ್ತಿ ಬೆಳಗುತ್ತಾರೆ. ನಂತರ ಯಥಾಪ್ರಕಾರ ಬೂದುಗುಂಬಳಕಾಯಿ ಒಡೆದಾಗಲೇ ಮನಸ್ಸಿಗೊಂದು ನೆಮ್ಮದಿ. ಆಯುಧಗಳ ಆರಾಧನೆಯ ನಂತರ ಸಿಹಿತಿನಿಸುಗಳನ್ನು ವಿತರಣೆ ಮಾಡಲಾಗುತ್ತೆ. ಹಾಗೇ ಕಂಪೆನಿಗಳಲ್ಲಿ ಆರ್ಥಿಕ ಸಂಕಷ್ಟದಿಂದ ಹೊರಬಂದಿರುವ ಕಚೇರಿಗಳು ತಮ್ಮನ್ನು ಬೆಳೆಸಿದ ಕಾರ್ಮಿಕರಿಗೆ ಬೋನಸ್ ನೀಡಿ ಸಂತಸದಿಂದ ಮನೆಗೆ ಕಳುಹಿಸುತ್ತಾರೆ. ಅಂತೆಯೇ ಸ್ವೀಟ್‌ಗಳನ್ನು ಕೂಡ ಹಂಚುತ್ತಾರೆ.

ಆಯುಧ ಪೂಜೆಯ ಹಿಂದೆ ಮತ್ತೊಂದು ಪೌರಾಣಿಕ ಮಹತ್ವವೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟ ರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆಂದು ಪುರಾಣ ಹೇಳುತ್ತೆ.
ವಸ್ತುಗಳನ್ನು ಯಾವ ರೀತಿ ಶುಚಿ ಮಾಡುತ್ತೆವೆಯೋ ಹಾಗೇ ಪ್ರತಿಯೋರ್ವನ ಮನಸ್ಸಿನಲ್ಲಿ ಹುದುಗಿದ್ದ ಕಲ್ಮಶಗಳೆಲ್ಲ ತೊಳೆದು ಬಾಳು ಬಂಗಾರವಾಗಲಿ ಎಂಬುದು ಈ ಆಚರಣೆಯ ಆಶಯ.