Friday, January 24, 2025
ಸುದ್ದಿ

ಪುತ್ತೂರು ಶಾಸಕರ ಶಿಲಾನ್ಯಾಸಗಳ ಹೈಜಾಕ್, ಶಿಷ್ಟಾಚಾರ ಉಲ್ಲಂಘನೆ ಖಂಡಿಸಿದ ಬಿಜೆಪಿ ಶಕ್ತಿ ಕೇಂದ್ರ : ಜನಸಾಮಾನ್ಯರಿಗೆ ನೀಡುತ್ತಿರುವ ತಪ್ಪು ಮಾಹಿತಿಯ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯ – ಕಹಳೆ ನ್ಯೂಸ್

ಪುತ್ತೂರು : ಬನ್ನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ಸಂಪರ್ಕ ಕೊಂಡಿಯಾಗಿ ಅಂದ್ರಟ್ಟ ಎಂಬಲ್ಲಿ ಸೇತುವೆಗೆ ಮಾಜಿ ಶಾಸಕರು ಈ ಹಿಂದೆ ಅನುದಾನ ಇರಿಸಿ, ಟೆಂಡರ್ ಆಗಿ ಶಿಲಾನ್ಯಾಸ ಆಗಿದ್ದರೂ ಮತ್ತೊಮ್ಮೆ ಹಾಲಿ ಶಾಸಕರು ಅಲ್ಲಿ ಶಿಲಾನ್ಯಾಸ ಮಾಡುವ ಮೂಲಕ ಹಾಲಿ ಶಾಸಕರು ಶಿಲಾನ್ಯಾಸಗಳ ಹೈಜಾಕ್ ಮಾಡಿದ್ದಲ್ಲದೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡುವ ಮೂಲಕ ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದು ಖಾಸಗಿ ಕಾಯಕ್ರಮವೋ, ಸರಕಾರಿ ಕಾರ್ಯಕ್ರಮವೊ, ಅಥವಾ ನಿಮ್ಮ ಅನುದಾನದಿಂದ ಆಗುವ ಕಾಮಗಾರಿಯೋ ಎಂದು ಶಾಸಕರು ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಚಿಕ್ಕಮುಡ್ನೂರು ಮತ್ತು ಶಾಂತಿಗೋಡು ಹಾಗು ನರಿಮೊಗರು ಗ್ರಾಮದ ಶಕ್ತಿಕೇಂದ್ರದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಹಾಲಿ ಶಾಸಕರನ್ನು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಚಿಕ್ಕಮುಡ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್. ಅವರು ಮಾತನಾಡಿ ಅಂದ್ರಟ್ಟ ಭಾಗದಿಂದ ಜಿಡೆಕಲ್ಲು ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ಹೋಗಲು ಮತ್ತು ಇತ್ತಿಂದತ್ತ ಹೋಗಲು ಒಂದು ಸಂಪರ್ಕ ರಸ್ತೆ ಇರಲಿಲ್ಲ. ಹಲಗೆ ಜೋಡಿಸಿ ನೀರು ಶೇಖರಣೆ ಮಾಡುವ ಹಳೆ ಕಿಂಡಿಅಣೆಕಟ್ಟು ಮಾತ್ರ ಇತ್ತು. ಅದು ಕೂಡಾ ಮಳೆಗಾಲದಲ್ಲಿ ಅಲ್ಲಿ ಅಪಾಯವಿತ್ತು. ಆ ಭಾಗದ ಜನರು ಚುನಾವಣೆ ಸಂದರ್ಭ ಮತಚಲಾಯಿಸಲು ಸುತ್ತಿ ಬಳಸಿ ಬರಬೇಕಾಗಿತ್ತು. ಈ ನಿಟ್ಟಿನಲ್ಲಿ ಆ ಭಾಗದ ಜನರು ಚುನಾವಣೆ ಬಹಿಷ್ಕಾರ ಕೂಡಾ ಹಾಕಿದ್ದರು. ಈ ನಡುವೆ ಕಿಂಡಿ ಅಣೆಕಟ್ಟುವಿನಲ್ಲಿ ಹಲವು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಕಾಲುಜಾರಿ ನೀರು ಪಾಲಾಗಿ ಮೃತಪಟ್ಟಿದ್ದರು. ಅದಾದ ಬಳಿಕ ಈ ಭಾಗದ ಸಮಸ್ಯೆಗಳಿಗೆ ಪತ್ರಿಕೆ ಮಾದ್ಯಮಗಳಲ್ಲಿ ವರದಿಯೂ ಬಂದಿತ್ತು. ಬಿಜೆಪಿಯಿಂದ ನಾವೆಲ್ಲ ಆ ಭಾಗಕ್ಕೆ ಸೇತುವೆ ನಿರ್ಮಾಣ ಮಾಡುವ ಕುರಿತು ಆಗಿನ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಮಾಡಿದ್ದೆವು. ಆಗ ಅಲ್ಲಿ ರಸ್ತೆಗೆ ಸ್ಥಳೀಯರು ಜಮೀನು ಬಿಟ್ಟುಕೊಡುವಂತೆ ಅಲ್ಲಿನ ಪ್ರಮುಖ ಜನರ ಮನವೊಲಿಸಲಾಯಿತು. ಕಾಕತಾಲಿಯವಾಗಿ ಮುಗೇರಡ್ಕ ತೂಗುಸೇತುವೆಯ ರೂ. 3 ಕೋಟಿ ಅನುದಾನವನ್ನು ಶಾಸಕ ಸಂಜೀವ ಮಠಂದೂರು ಅವರು ಅಂದ್ರಟ್ಟ ಮತ್ತು ಬಜತ್ತೂರು ಗ್ರಾಮದ ಕೂವೆಚ್ಚಾರಿಗೆ ಇರಿಸಿದ್ದರು. ಅನುದಾನದ ಟೆಂಡರ್ ಕೃಷ್ಣಮೂರ್ತಿ ಎಂಬವರಿಗೆ ಆಗಿತ್ತು. ಈ ನಿಟ್ಟಿನಲ್ಲಿ 2023ರ ಮಾರ್ಚ್ 19ಕ್ಕೆ ಸಂಜೀವ ಮಠಂದೂರು ಅವರ ಮೂಲಕ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಶಿಲಾನ್ಯಾಸವಾದ ಬಳಿಕ ಗುತ್ತಿಗೆದಾರರು ಕೂವೆಚ್ಚಾರು ಸೇತುವೆ ಪೂರ್ಣಗೊಳಿಸಿದ್ದಾರೆ. ಅಂದ್ರಟ್ಟ ಸೇತುವೆ ಕಾಮಗಾರಿ ವೇಳೆ ಮಳೆ ಬಂದ ಹಿನ್ನಲೆಯಲ್ಲಿ ಮತ್ತು ಅವರಿಗೆ ಮಾರ್ಚ್ ತಿಂಗಳ ಒಳಗೆ ಕಾಮಗಾರಿ ಮುಗಿಸುವ ಕಾಲಾವಕಾಶ ಇದ್ದರಿಂದ ಕಾಮಗಾರಿಯನ್ನು ಮಳೆ ಬಿಟ್ಟ ಮೇಲೆ ಮುಂದುವರಿಸಿದ್ದಾರೆ. ಇಷ್ಟೆಲ್ಲಾ ಕಾಮಗಾರಿ ಪ್ರಗತಿಯಲ್ಲಿದ್ದರೂ ಹಾಲಿ ಶಾಸಕರು ಮತ್ತೊಮ್ಮೆ ಅಂದ್ರಟ್ಟದಲ್ಲಿ ಶಿಲಾನ್ಯಾಸ ಮಾಡಿದ್ದಾರೆ. ಇದರ ಜೊತೆಗೆ ಸ್ಥಳೀಯ ಮೂರು ಪಂಚಾಯತ್ ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಈ ಸೇತುವೆ ಶಿಲಾನ್ಯಾಸ ಕಾರ್ಯಕ್ರಮ ಖಾಸಗಿಯೋ, ಸರಕಾರಿ ಕಾರ್ಯಕ್ರಮವೋ ಹಾಗು ಹಾಲಿ ಶಾಸಕರ ಅನುದಾನದಿಂದ ಆಗುವ ಕಾಮಗಾರಿಯೋ ಎಂದು ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಹಿಂದಿನ ಸರಕಾರ ಮಾಡಿದ ಕೆಲಸವನ್ನು ಹೈಜಾಕ್ ಮಾಡುವುದು ಬಿಟ್ಟು ಮೆಡಿಕಲ್ ಕಾಲೇಜು ತಿಂಗಳೊಳಗೆ ತರುತ್ತೇನೆಂದ ಶಾಸಕರು ಇನ್ನೂ ಅದರ ಬಗ್ಗೆ ಮಾತನಾಡಲಿ. ಶಿಲಾನ್ಯಾಸ ಮಾಡುವುದು ಬಿಟ್ಟು ಹಿಂದೆ ಮಾಡಿದ ಶಿಲ್ಯಾನ್ಯಾಸಕ್ಕೆ ಸಂಬAಧಿಸಿ ಕಾಮಗಾರಿಗೆ ವೇಗ ಕೊಟ್ಟು ಅದರ ಉದ್ಘಾಟನೆ ಮಾಡಲಿ. ಆಗ ನಾವು ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ನಾಗೇಶ್ ಟಿ.ಎಸ್ ಹೇಳಿದರು.

ಶಾಂತಿಗೋಡು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್ ಅವರು ಮಾತನಾಡಿ ಶಿಲಾನ್ಯಾಸವನ್ನು ಮತ್ತೊಮ್ಮೆ ಮಾಡುವುದಾದರೆ ಅಲ್ಲಿ ಕಾಮಗಾರಿ ರೀ ಟೆಂಡರ್ ಆಗಿದ್ದರೆ ಮಾಹಿತಿ ನೀಡಿ. ಇಲ್ಲವಾದಲ್ಲಿ ಹಾಲಿ ಶಾಸಕರು ಮಾಡಿದ ಕೆಲಸವಾದರೂ ಏನು ಎಂಬುದನ್ನು ಮಾಹಿತಿ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ. ಈ ನಡುವೆ ಪುರುಷರಕಟ್ಟೆ ನರಿಮೊಗರು ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಗೆ ರೂ. 2.75 ಕೋಟಿ ಅನುದಾನ ತಂದಿದ್ದೇನೆ ಎಂದು ಬ್ಯಾನರ್ ಅಳವಡಿಸುತ್ತಿದ್ದಾರೆ. ಈ ಕುರಿತು ಕೂಡಾ ಅನುದಾನ ತಂದವರು ಯಾರು ಎಂದು ಮಾಹಿತಿ ನೀಡಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನರಿಮೊಗರು ಪಂಚಾಯತ್ ಅಧ್ಯಕ್ಷೆ ಹರಿಣಿ, ನರಿಮೊಗರು ಪಂಚಾಯ್ ಸದಸ್ಯರು ಮತ್ತು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ರೈ ಶೇವಿರೆ, ಬನ್ನೂರು ಗ್ರಾ.ಪಂ ಸದಸ್ಯ ರಾಘವೆಂದ್ರ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.