ರಾಜ್ಯದ ದೇಗುಲಗಳಲ್ಲಿ ಅಧಿಕೃತವಾಗಿ ನೂತನ ವಸ್ತ್ರಸಂಹಿತೆ ಜಾರಿ : ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಬೇಡಿಕೆ ಈಡೇರಿಸಿದ ಸರಕಾರ – ಕಹಳೆ ನ್ಯೂಸ್
ಮಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ದೇವಾಲಯಗಳಲ್ಲಿ ಅಧಿಕೃತವಾಗಿ ನೂತನ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಇನ್ಮುಂದೆ ದೇಗುಲಗಳಿಗೆ ಅರೆಬರೆ ಬಟ್ಟೆ ಧರಿಸಿ ಬಂದರೆ ಪ್ರವೇಶ ನಿರಾಕರಿಸಲಾಗುತ್ತದೆ. ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕುರಿತು ಕರ್ನಾಟಕ ದೇವಸ್ಥಾನ-ಮಠ, ಧಾರ್ಮಿಕ ಸಂಸ್ಥೆಗಳ ಮಹಾಸಂಘ ಹಾಗೂ ರಾಜ್ಯದ ಎಲ್ಲಾ ದೇವಾಲಯ ಮತ್ತು ಮಠಗಳ ಅರ್ಚಕರು ಮತ್ತು ಟ್ರಸ್ಟಿಗಳು ನಡೆಸಿ ಸಭೆಯಲ್ಲಿ ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ತೀರ್ಮಾನಿಸಿದ್ದರು. ಹೀಗಾಗಿ ಇಂದಿನಿಂದ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಿದೆ.
ಇಂದಿನಿಂದಲೇ ಈ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದ್ದು, ದೇವಾಲಯಗಳ ಒಳಗೆ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದ ಹಿಂದೂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ನೂತನ ವಸ್ತ್ರಸಂಹಿತೆ ಪ್ರಕಾರ ಪುರುಷರು ದೇವಾಲಯಕ್ಕೆ ಚಡ್ಡಿ, ಬರ್ಮುಡಾ, ಹರಿದ ಜೀನ್ಸ್, ಎದೆ ಕಾಣುವ ಟೀ-ಶರ್ಟ್ ಧರಿಸಿ ಪ್ರವೇಶಿಸುವಂತಿಲ್ಲ. ಮಹಿಳೆಯರು ಸ್ಕರ್ಟ್, ಮಿಡಿ, ಹರಿದ ಜೀನ್ಸ್, ಶಾಟ್ರ್ಸ್ ಹಾಕಿಕೊಂಡು ಬರುವಂತಿಲ್ಲ. ದಕ್ಷಿಣ ಕನ್ನಡ-ಉಡುಪಿಯ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸಿ ದೇವಾಲಯದ ಒಳಗೆ ಹೋಗುವಂತಿಲ್ಲ. ಭಾರತೀಯ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಕರ್ನಾಟಕ ದೇವಸ್ಥಾನ ಮಹಾಸಂಘ ದೇಗುಲಗಳ ಮುಂದೆ ಬೋರ್ಡ್ ಹಾಕಲಿದೆ.