60 ವರ್ಷದ ಹಿಂದಿನ ಕನಸಿನ ಯೋಜನೆ ; ಇಂದು ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ – ಕಹಳೆ ನ್ಯೂಸ್
– 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಮೋದಿ
– 1962ರಲ್ಲೇ ಎರಡು ನಗರಗಳ ಮಧ್ಯೆ ನೇರ ಸಂಚಾರಕ್ಕೆ ಯೋಜನೆ ತಯಾರಿ
ಮುಂಬೈ: 60 ವರ್ಷದ ಹಿಂದೆ ಸಿದ್ಧಗೊಂಡ ಕನಸಿನ ಯೋಜನೆ, ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ (India’s Longest Sea Bridge) ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTHL) ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆ ಮಾಡಲಿದ್ದಾರೆ .
ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ 21.8 ಕಿಲೋಮೀಟರ್ ಉದ್ದದ ಸೇತುವೆಯು ಪ್ರಸ್ತುತ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ.
ರಾಜ್ಯದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೆ MTHL ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. MTHL 6 ಲೇನ್ ಮಾರ್ಗ ಹೊಂದಿದೆ. ಸಮುದ್ರದ ಮೇಲೆ 16.50 ಕಿಲೋಮೀಟರ್ ಮತ್ತು ಭೂಮಿಯಲ್ಲಿ 5.50 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಸೇತುವೆಗೆ ʼಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುʼ ಎಂದು ಹೆಸರನ್ನು ಇಡಲಾಗಿದೆ.
ಸೇತುವೆಯ ವಿಶೇಷತೆ ಏನು?
ಈ ಯೋಜನೆಯು ಸರಿಸುಮಾರು 21 ಕಿ.ಮೀ. ಉದ್ದದ 6 ಲೇನ್ (3+3-ಲೇನ್, 2 ತುರ್ತು ಲೇನ್) ಸೇತುವೆಯನ್ನು ಮುಂಬೈ ನಗರದ ಶಿವಡಿ ಮತ್ತು ಮುಖ್ಯ ಭೂಭಾಗದ ನ್ಹಾವಾವನ್ನು ಸಂಪರ್ಕಿಸುತ್ತದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ, ಮುಂಬೈ-ಗೋವಾ ಎಕ್ಸ್‌ಪ್ರೆಸ್‌ವೇ, ವಿರಾರ್-ರಾಯ್‌ಘಡರ್ ಕಾರಿಡರ್ ಸಂಪರ್ಕ ಇನ್ನು ಮುಂದೆ ಸುಲಭವಾಗಲಿದೆ.
ಈ ರಸ್ತೆಯಲ್ಲಿ 4 ಚಕ್ರದ ವಾಹನಗಳಿಗೆ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ಬೈಕ್, ಅಟೋರಿಕ್ಷಾ, ಟ್ರ್ಯಾಕ್ಟರ್ ಸಂಚಾರವನ್ನು ನಿರ್ಬಂಧಿಸಲಾಗಿದೆ.
1962 ರಲ್ಲೇ ಎರಡು ನಗರಗಳ ಮಧ್ಯೆ ಸಂಚಾರ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಜಾರಿ ಸಂಬಂಧ ಹಲವು ಅಧ್ಯಯನಗಳು ನಡೆದಿದ್ದವು. 2008ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಜಾರಿಗೆ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಈ ಯೋಜನೆಯಲ್ಲಿ ರಾಜಕೀಯದ ಗಾಳಿ ಬೀಸಿ ಭಾರೀ ಟೀಕೆ ಬಂದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಕೊನೆಗೆ ಎಲ್ಲಾ ಇಲಾಖೆಗಳ ಅನುಮತಿ ಪಡೆದ ಬಳಿಕ 2016ರ ಡಿಸೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಭೂಮಿ ಸ್ವಾಧೀನ ಪಡಿಸಿದ ಬಳಿಕ 2018ರ ಏಪ್ರಿಲ್ 24 ರಂದು ಕಾಮಗಾರಿ ಆರಂಭವಾಗಿತ್ತು.
ನಿಗದಿ ಪ್ರಕಾರ ಸೆಪ್ಟೆಂಬರ್ 22, 2022ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಕೋವಿಡ್, ಲಾಕ್‌ಡೌನ್ ನಂತರ ಕಾರ್ಮಿಕರ ಸಮಸ್ಯೆಯಿಂದಾಗಿ ಯೋಜನೆ ಮುಂದಕ್ಕೆ ಹೋಗಿ ಈಗ ಜನವರಿಯಲ್ಲಿ ಉದ್ಘಾಟನೆಯಾಗುತ್ತಿದೆ.
ಆರಂಭದಲ್ಲಿ ಈ ಯೋಜನೆ ನಿರ್ಮಾಣಕ್ಕೆ 14,712.70 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಈ ವೆಚ್ಚ 16,904.43 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಆರ್‌ಟಿಐ ಅಡಿ ಉತ್ತರ ಸಿಕ್ಕಿತ್ತು.