ಉಡುಪಿ : ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಪರ್ಯಾಯ ಪೀಠಾರೋಹಣ ಸಮಾರಂಭದಲ್ಲಿ ವಿಶ್ವದ ಆಧ್ಯಾತ್ಮಪ್ರಿಯರ ಗಮನವನ್ನು ಸೆಳೆಯುತ್ತಿದೆ.
ಪುತ್ತಿಗೆ ಶ್ರೀಗಳು ತಮ್ಮ ಪರ್ಯಟನೆ ಸಂದರ್ಭ ಹಲವು ಗಣ್ಯರು ಅವರ ಪ್ರಭಾವಕ್ಕೊಳಗಾಗಿದ್ದು, ಅವರಲ್ಲಿ ಕೆಲವರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಲ್ಯೂಕ್ ಡನೆಲನ್ ಅವರು ಆಸ್ಟ್ರೇಲಿಯಾದ ವಿಕ್ಟೋರಿಯಾದ ಮಾಜಿ ಸಚಿವರಾಗಿದ್ದಾರೆ. ವಿಕ್ಟೋರಿಯದಲ್ಲಿರುವ ದಕ್ಷಿಣ ಭಾರತದ ಹಿಂದೂ ಸಮುದಾಯಕ್ಕೆ ಅಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸ್ಥಾಪಿಸಿರುವ ಕೃಷ್ಣ ದೇವಾಲಯ ಹಿಂದುಗಳ ಹಬ್ಬಗಳ ಆಚರಣೆಯಲ್ಲಿ ವಹಿಸುತ್ತಿರುವ ಮಹತ್ವಪೂರ್ಣ ಸೇವೆಯನ್ನು ಅವರು ಶ್ಲಾಘಿಸಿದ್ದು, ಜನವರಿ 18ರಂದು ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಶ್ರೀಗಳಿಗೆ ಪತ್ರ ಬರೆದಿದ್ದಾರೆ.
ಅಮೆರಿಕಾದ ವರ್ಲ್ಡ್ ರಿಲಿಜಿಯಸ್ ಮತ್ತು ಸ್ಪಿರಿಚುವಾಲಿಟಿ ಉಪಾಧ್ಯಕ್ಷ ಡಾ.ವಿಲಿಯಂ ಎಫ್. ವೆಂಡ್ಲಿಯವರು ಆಧುನಿಕ ವಿಜ್ಞಾನ ಮತ್ತು ಇತಿಹಾಸ, ಧರ್ಮಗಳ ನಡುವೆ ಸಮನ್ವಯ ಸಾಧಿಸುವ ಶೇರ್ಡ್ ಸೇಕ್ರೆಡ್ ಸ್ಟೋರಿ ಎಂಬ ಯೋಜನೆಯ ಮುಖ್ಯಸ್ಥರು. ಡಾ. ವೆಂಡ್ಲಿ ಫೆಟ್ಲರ್ ಎಂಬ ಸಂಸ್ಥೆ ಸೇರುವ ಮೊದಲು 27 ವರ್ಷ ರಿಲಿಜಿಯನ್ಸ್ ಫಾರ್ ಪೀಸ್ ಮಹಾಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಿಲಿಜಿಯನ್ಸ್ ಫಾರ್ ಪೀಸ್ ಎಂಬುದು ವಿಶ್ವದ ಬೃಹತ್ತಾದ ಒಂದು ಬಹುಧರ್ಮೀಯ ಸಂಘಟನೆಯಾಗಿದೆ. ಇದು ವಿಶ್ವದ 100ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯವೆಸಗುತ್ತಿದೆ.
10 ವರ್ಷಗಳ ಕಾಲ ನಡೆದ ಅಂತರ್ಯುದ್ಧದ ನಡುವೆ ಸಿಯೆರಾ ಲಿಯೋನ ಅಂತರ್ ಧಾರ್ಮಿಕ ಸಮಿತಿ, ಎಚ್.ಐ.ವಿ. ಏಡ್ಸ್ ನಿಂದ ಅನಾಥರಾದ ಆಫ್ರಿಕಾದ ಮಕ್ಕಳ ನೆರವಿಗೆ ಸ್ಥಾಪಿಸಲಾದ ಹೋಪ್ ಫಾರ್ ಆಫ್ರಿಕನ್ ಚಿಲ್ಡ್ರನ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿರುವ ಡಾ. ವೆಂಡ್ಲಿ, ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳ ವಿಜೇತರು. ಡಾ. ವೆಂಡ್ಲಿ ಶ್ರೀಸುಗುಣೇಂದ್ರ ತೀರ್ಥರನ್ನು ಹಿಂದು ಆಧ್ಯಾತ್ಮಿಕ ಪರಂಪರೆಯ ಸಾಕಾರಮೂರ್ತಿ ಎಂದು ಶ್ಲಾಘಿಸಿರುತ್ತಾರೆ.