Recent Posts

Sunday, January 19, 2025
ಪುತ್ತೂರುಶಿಕ್ಷಣಸುದ್ದಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದ ವತಿಯಿಂದ ಶ್ರೀರಾಮೋತ್ಸವ – ಶ್ರೀರಾಮ ಭಾವ ಪೂಜೆಯ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್

ಪುತ್ತೂರು : ಒಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂದು ಕೇಳಿದರೆ ಶ್ರೀರಾಮನ ಬದುಕನ್ನೇ ಉದಾಹರಣೆ ನೀಡುತ್ತೇವೆ. ನೈತಿಕತೆ ಬೇರೆ ಅಲ್ಲ, ಶ್ರೀರಾಮ ಬೇರೆ ಅಲ್ಲ. ರಾಮನ ವ್ಯಕ್ತಿತ್ವ ಎಲ್ಲರಿಗಿಂತ ವ್ಯತ್ಯಸ್ತವಾಗಿ, ಜನರಿಗೆ ಆದರ್ಶವಾಗಿ ಕಾಣಿಸಿಕೊಳ್ಳುತ್ತದೆ ಎಂದು ಯಕ್ಷಗಾನ ಅರ್ಥದಾರಿ ಹಾಗೂ ಪ್ರಾಧ್ಯಾಪಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ಶ್ರೀರಾಮೋತ್ಸವ – ಶ್ರೀರಾಮಭಾವ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ವೈಚಾರಿಕತೆ ಎಂದರೆ ಸರಿಯಾಗಿ ಅಧ್ಯಯನ ಮಾಡಿ, ಚಿಂತನೆಗಳ ಮಂಥನ ಮಾಡಿ ವಿಚಾರಗಳನ್ನು ತಿಳಿದುಕೊಳ್ಳುವ ಮನೋಧರ್ಮ. ಶ್ರೀರಾಮನ ಕುರಿತು ವಿಚಾರ ಮಂಥನ ಮಾಡಿದರೆ ಜನಾಭಿಪ್ರಾಯಕ್ಕೆ ಬೆಲೆ ಕೊಟ್ಟು ಸೀತಾಪರಿತ್ಯಾಗ ಮಾಡಿ ನೈತಿಕ ಹೊಣೆಗಾರಿಕೆಯನ್ನು ನಿಭಾಯಿಸಿದ ಶ್ರೀರಾಮ ಧರ್ಮವಂತನೆಂದು ನಿರೂಪಿಸುತ್ತಾನೆ. ಮನುಷ್ಯನನ್ನು ದೇವರಾಗಿಸುವ ನೀತಿ ಎಂದರೆ ಅದು ರಾಮನೀತಿ. ಹಾಗಾಗಿ ಸಂದರ್ಭೋಚಿತ ನಿರ್ಧಾರಗಳನ್ನು ಕೈಗೊಂಡ ಶ್ರೀರಾಮ ಆದರ್ಶಪುರುಷ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ| ಕೃಷ್ಣ ಭಟ್ ಕೆ ಎಂ, ಇಂದಿನ ಯುವಜನತೆ ಪಾಶ್ಚಾತ್ಯ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯ ಚಿಂತನೆಗಳ ನಡುವೆ ಏರ್ಪಟ್ಟ ಹಣಾಹಣಿಯ ಮಧ್ಯೆ ಸಿಲುಕಿದೆ. ಈ ಸ್ಪರ್ಧೆಯಲ್ಲಿ ಗೆಲ್ಲುವುದು ನಮ್ಮ ಸನಾತನ ಸಂಸ್ಕೃತಿಯೇ ಎಂಬುದನ್ನು ಸಾಬೀತುಪಡಿಸಲು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಆಗುತ್ತಿರುವುದೇ ಸಾಕ್ಷಿ. ತಲೆಮಾರುಗಳಿಂದ ತಲೆಮಾರುಗಳಿಗೆ ಶಕ್ತಿ ಮತ್ತು ಒಳ್ಳೆಯ ಚಿಂತನೆಗಳನ್ನು ವರ್ಗಾವಣೆ ಮಾಡಿದ ಶ್ರೀರಾಮ ನಮ್ಮೊಳಗೆ ಸೇರಿ ಹೋಗಿದ್ದಾನೆ. ಅದನ್ನು ನಮ್ಮ ಬದುಕಿನಲ್ಲಿ ಯಾವರೀತಿಯಾಗಿ ಅಳವಡಿಸಿಕೊಳ್ಳತ್ತೇವೆ ಎಂಬುದು ಪ್ರಮುಖಪಾತ್ರ ವಹಿಸುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುವುದನ್ನು ದೇಶಾದ್ಯಂತ ಸಂಭ್ರಮಿಸುತ್ತಿದ್ದೇವೆ. ಶ್ರೀರಾಮಚಂದ್ರ ಧರ್ಮವಂತನೂ, ಉತ್ತಮ ರಾಜಕಾರಣಿಯೂ ಆಗಿದ್ದಾನೆ. ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಪರಿಕಲ್ಪನೆಗೆ ಮಹತ್ತರ ಸ್ಥಾನವಿದೆ. ಹಾಗಾಗಿ ಶ್ರೀರಾಮನ ಗುಣಲಕ್ಷಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಸ್ವಾಗತಿಸಿ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ ಎನ್ ಕಾರ್ಯಕ್ರಮದ ಪ್ರಸ್ತಾವನೆಗೈದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮನಮೋಹನ ಎಂ ವಂದಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉದ್ಘಾಟನೆ :
ಇಂದಿನ ಕಾರ್ಯಕ್ರಮದ ಗಣ್ಯರು ಹಾಗೂ ಕಾಲೇಜಿನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೇಮ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸನ್ಮಾನ ಕಾರ್ಯಕ್ರಮ:
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಕಚೇರಿ ಸಹಾಯಕರಾದ ಎನ್ ಮೋಹನ್ ಮತ್ತು ಕದುರಪ್ಪ ಅವರನ್ನು ಗೌರವಿಸಲಾಯಿತು.

ಶ್ರೀರಾಮ ಭಾವ ಪೂಜೆ:
ಶ್ರೀರಾಮೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಭಜನೆಯ ಹಾಗೂ ಪುರುಷೋತ್ತಮನ ತಾರಕ ಮಂತ್ರದೊಂದಿಗೆ ಆರಂಭಿಸಿದರು. ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಶ್ರೀರಾಮನಿಗೆ ಪೂಜೆ ಸಲ್ಲಿಸಿ ಪ್ರಾಸದವನ್ನು ವಿತರಿಸಿದರು.

 ಕಾರ‍್ಯಕ್ರಮದ ಆಶಯ:
ಶ್ರೀರಾಮೋತ್ಸವದ ಮೊದಲ ದಿನ ಬಾಲರಾಮನ್ನು ಸ್ಮರಿಸಿ, ವಿದ್ಯಾರ್ಥಿ ಸಮೂಹ ಹಾಗೂ ಸಮಾಜಕ್ಕೆ ಶ್ರೀರಾಮನ ಆಶಯಗಳು, ಪ್ರಾಮಾಣಿಕತೆಯ ಜೊತೆಗೆ ರಾಜತಾಂತ್ರಿಕತೆಯನ್ನು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಮಹಾವಿದ್ಯಾಲಯ ಮಾಡುತ್ತಿದೆ.