Tuesday, November 26, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಟ್ರಾಫಿಕ್ ಪೋಲೀಸರ ಬೈಕ್‍ಗೆ ಇಲ್ಲ ಇನ್ಸೂರೆನ್ಸ್..!: ಸುಖಾಸುಮ್ಮನೆ ತಗಲಾಕೊಂಡ ಬಂಟ್ವಾಳ ಟ್ರಾಫಿಕ್ ಪೋಲಿಸ್– ಕಹಳೆ ನ್ಯೂಸ್

ಬಂಟ್ವಾಳ: ಹೆಲ್ಮೆಟ್ ಹಾಕದೆ ಸಂಚಾರ ಮಾಡುವ ವೇಳೆ ಟ್ರಾಫಿಕ್ ಪೋಲೀಸರು ಬೈಕ್ ಒಂದನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಹೋಗಿದ್ದಾರೆ ಎಂಬ ಕಾರಣಕ್ಕಾಗಿ ಅಟ್ಟಿಸಿಕೊಂಡು ಬಂದು ನಿಲ್ಲಿಸಿ ಹೋಗಿದ್ದ ಬೈಕ್ ಗೆ ಲಾಕ್ ಹಾಕಿದಾಗ ಸಾರ್ವಜನಿಕರು ಹಾಗೂ ಟ್ರಾಫಿಕ್ ಎ.ಎಸ್.ಐ. ಮಧ್ಯೆ ಜಟಾಪಟಿ ನಡೆದ ಘಟನೆ ಬಿಸಿರೋಡಿನ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದಿದೆ.

ಟ್ರಾಫಿಕ್ ಎ.ಎಸ್.ಐ.ಜನಾರ್ಧನ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದು ಬಳಿಕ ಬೈಕ್ ಗೆ ಹಾಕಲಾಗಿದ್ದ ಲಾಕ್ ಅನ್ನು ತೆಗದು ಹೋದ ಘಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಡೆದದ್ದು ಏನು?
ಭಾಸ್ಕರ ಮಣಿಹಳ್ಳ ಎಂಬವರು ಬೈಕ್ ರಿಪೇರಿಗಾಗಿ ಕೈಕುಂಜೆಯ ಮ್ಯಾಕನಿಕ್ ಬಳಿ ಇಟ್ಟಿದ್ದರು. ಇವರ ಬೈಕ್ ಯಾವುದು ಪ್ರಕರಣದಲ್ಲಿ ಪೋಲೀಸ್ ಠಾಣೆಯಲ್ಲಿ ಹಲವು ಸಮಯದಿಂದ ಇದ್ದು, ಬ್ಯಾಟರಿ ಸಹಿತ ಇನ್ನಿತರ ಸಾಮಾಗ್ರಿಗಳು ಕೆಟ್ಟುಹೋಗಿತ್ತು. ಠಾಣೆಯಿಂದ ಬಿಡುಗಡೆಗೊಳಿಸಿದ ಬೈಕ್ ನ್ನು ರಿಪೇರಿಗಾಗಿ, ಅವರು ಶಬರಿಮಲೆ ಯಾತ್ರೆ ಹೋಗುವ ವೇಳೆ ಮ್ಯಾಕನಿಕ್ ಬಳಿ ರಿಪೇರಿಗಾಗಿ ಇಟ್ಟಿದ್ದರು. ನಿನ್ನೆ ಶಬರಿಮಲೆಯಿಂದ ಆಗಮಿಸಿ ಇಂದು ಬೆಳಿಗ್ಗೆ ‌ರಿಪೇರಿಯಾಗಿರುವ ಬೈಕ್ ನ ಟೆಸ್ಟ್ ರೈಡ್ ಮಾಡುವ ಉದ್ದೇಶದಿಂದ ಕೈಕುಂಜೆ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಟ್ರಾಫಿಕ್ ಪೋಲೀಸರು ಬೈಕನ್ನು ನಿಲ್ಲಿಸಲು ಸೂಚಿಸಿದ್ದಾರೆ .

ಆದರೆ ಬೈಕ್ ಸವಾರ ಭಾಸ್ಕರ್ ಮಣಿಹಳ್ಳ ಅವರು ಬೈಕ್ ನಿಲ್ಲಿಸದೆ ಹೋಗಿದ್ದಾರೆ. ಈ ಕಾರಣಕ್ಕಾಗಿ ಎ.ಎಸ್.ಐ.ಹಾಗೂ ಸಿಬ್ಬಂದಿಯವರು ಸವಾರನನ್ನು ಬೆನ್ನಟ್ಟಿ ಕೊಂಡು ಬಂದು ತಾಲೂಕು ಪಂಚಾಯತ್ ನ ಎದುರು ಮರದ ಅಡಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕ್ ಗೆ ಲಾಕ್ ಹಾಕಿದ್ದಾರೆ. ಇದರಿಂದ ಕುಪಿತರಾದ ಬೈಕ್ ಸವಾರ ಹಾಗೂ ಸಾರ್ವಜನಿಕರು ಇವರ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೋಲಿಸ್ ಹಾಗೂ ಸಾರ್ವಜನಿಕರ ನಡುವೆ ಸುಮಾರು ಹೊತ್ತು ವಾಗ್ವಾದಗಳು ನಡೆಯಿತು.

ಲಾಕ್ ಅಳವಡಿಸಲು ‌ಅವಕಾಶ ಇದೆಯಾ?
‌‌ಟ್ರಾಫಿಕ್ ರೂಲ್ ಬ್ರೇಕ್ ಮಾಡಿದಾಗ ಅಂತಹ ವಾಹನ ಸವಾರರನ್ನು ಬೆನ್ನಟ್ಟಿಕೊಂಡು ಬಂದು ವಾಹನಗಳಿಗೆ ಲಾಕ್ ಹಾಕುವ ಅವಕಾಶ ಟ್ರಾಫಿಕ್ ಪೋಲೀಸರಿಗೆ ಇದೆಯಾ? ಎಂಬ ಪ್ರಶ್ನೆ ಸಾರ್ವಜನಿಕರು ಮಾಡಿದ್ದಾರೆ. ಟ್ರಾಫಿಕ್ ನಿ‌ಯಮ‌ಪಾಲನೆ ಮಾಡದ ಸವಾರರಿಗೆ ನೋಟೀಸ್ ನೀಡಬಹುದು ವಿನಹ: ಅಂತಹ ವಾಹನಗಳನ್ನು ಬೆನ್ನಟ್ಟಿ ಹೋಗುವುದಕ್ಕೆ ಅವಕಾಶ ಇಲ್ಲ,ಮತ್ತು ವಿಶಾಲವಾದ ಖಾಸಗಿ ಜಾಗದಲ್ಲಿ ನಿಲ್ಲಿಸಿ ಹೋಗಿರುವ ಬೈಕ್ ಗೆ ಲಾಕ್ ಹಾಕಲು ನಿಮಗೆ ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡಿದ್ದಾರೆ.

ನಿಯಮ ಮೀರಿ ಸಂಚಾರ ಮಾಡಿದ ವಾಹನ ಸವಾರನಿಗೆ ನೋಟೀಸ್ ಜಾರಿ ಮಾಡಿ, ಅದು ಬಿಟ್ಟು ನೀವು ಕೊಲೆಗಾರನನ್ನು ,ಅಥವಾ ಕಳ್ಳತನ ಮಾಡಿದ ಆರೋಪಿಯನ್ನು ಬೆನ್ನಟ್ಟಿ ಕೊಂಡು ಬಂದ ರೀತಿಯಲ್ಲಿ ಬಂದು ನಿಲ್ಲಿಸಿ ಹೋಗಿರುವ ಬೈಕ್ ಗೆ ಲಾಕ್ ಹಾಕಿರುವುದು ಸರಿಯಲ್ಲ, ಲಾಕ್ ತೆಗೆಯುವಂತೆ ಒತ್ತಾಯ ಮಾಡಿದರು.

ದಂಡ ವಸೂಲಿ ಬಡವರ ಮೇಲೆ ಪ್ರಯೋಗ? ಆಕ್ರೋಶ
ಬಿಸಿರೋಡಿನ ಹೃದಯಭಾಗವಾದ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಪೋಲೀಸರು ಪ್ರತಿ ದಿನ ದಂಡ ವಸೂಲಿಗಾಗಿ‌ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಕೆಲವೊಂದು ಬೈಕ್ ಸವಾರರು ಪೋಲೀಸರನ್ನು ನೋಡಿ ಹೆದರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ ಎಂದು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳ ಮೇಲೆ ಪ್ರಕರಣ ದಾಖಲಿಸುವ ಪೋಲೀಸರು ವಾಹನ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡಿ ಎಂದು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆಸ್ಪತ್ರೆಗೆ ಹೋದರು ದಂಡ, ಅಂಗಡಿಗೆ ಹೋದರು ವಾಹನಕ್ಕೆ ಲಾಕ್ ಹೀಗೆ ಪೋಲೀಸರು ಸಾರ್ವಜನಿಕರ‌ಮೇಲೆ ಬಲ ಪ್ರಯೋಗ ಮಾಡಿದರೆ ಬದುಕು ಸಾಗಿಸುವುದು ಕಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಪೋಲೀಸ್ ಇಲಾಖೆಯ ವರ್ತನೆ ಯಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂದು ಅರೋಪ ಮಾಡಿದರು. ಹೆದ್ದಾರಿಯ ಬದಿಯಲ್ಲಿ ಬಡವರು ಬೈಕ್ ಅಥವಾ ಇತರ ಸಣ್ಣ ವಾಹನಗಳನ್ನು ನಿಲ್ಲಿಸಿದರೆ ಅಪರಾಧ ಕಾನೂನು ರೀತಿಯಲ್ಲಿ ವಿರುದ್ದ, ಆದರೆ ಪಾಣೆಮಂಗಳೂರು ಸೇತುವೆ ಸಮೀಪ ಹೆದ್ದಾರಿಯ ಬದಿಯಲ್ಲಿರುವ ಸಾಗರ್ ಆಡಿಟೋರಿಯಂ ಮದುವೆ ಹಾಲ್ ನ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಬದಿ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗಿ ತಾಸು ಗಟ್ಟಲೆ ಸಂಚಾರಕ್ಕೆ ತೊಂದರೆಯಾದರೆ ಅವರ ಬಗ್ಗೆ ಯಾರು ಕೇಳುವರಿಲ್ಲ,ಅಂತಹ ಸಂದರ್ಭದಲ್ಲಿ ಪೋಲೀಸರು ಯಾಕೆ ಪ್ರಕರಣ ದಾಖಲು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಬಡವರಿಗೆ ಒಂದು ನ್ಯಾಯ ಉಳ್ಳವರಿಗೆ ಒಂದು ನ್ಯಾಯನಾ ಎಂದು ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಬಾರದು ಎಂಬ ದೃಷ್ಟಿಯಿಂದ ಪ್ರತಿಭಟನೆ ನಡೆಸಲು ಅವಕಾಶ ನೀಡದ ಇಲಾಖೆ ಈ ಮದುವೆ ಹಾಲ್ ನ ಮುಂಭಾಗದಲ್ಲಿ ನಡೆಯುವ ಟ್ರಾಫಿಕ್ ಜಾಮ್ ಗೆ ಯಾಕೆ ಪರಿಹಾರ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಪೋಲಿಸ್ ಬೈಕ್ ಗೆ ವಿಮೆ ಇಲ್ಲ? ಸಾರ್ವಜನಿಕರ ಆರೋಪ
ಪೋಲಿಸ್ ಮತ್ತು ಸಾರ್ವಜನಿಕರ ಮಧ್ಯೆ ವಾಗ್ವಾದಗಳು ನಡೆಯುವ ಸಂದರ್ಭದಲ್ಲಿ ಟ್ರಾಫಿಕ್ ಎ.ಎಸ್.ಐ. ಬಳಕೆ ಮಾಡಿದ ಬೈಕ್ ನ ವಿಮೆ ಪಾಲಿಸಿಯ ಅವಧಿ ಮುಗಿದಿದೆ ಎಂದು ಆನ್ ಲೈನ್ ತೋರಿಸುತ್ತಿದೆ ಎಂದು ಆರೋಪ ಮಾಡಿದರು. ವಿಮೆ ಇಲ್ಲದೆ ಪೋಲೀಸರ ವಾಹನ ರಸ್ತೆಗೆ ಇಳಿಯಬಹುದಾ? ಪೋಲೀಸರಿಗೊಂದು ಕಾನೂನು ಸಾರ್ವಜನಿಕರಿಗೆ ಒಂದು ಕಾನೂನಾ? ಎಂದು ಪ್ರಶ್ನೆ ಮಾಡಿದರು. ಸರಕಾರಿ ವಾಹನಗಳ ಪಾಲಿಸಿ ಕೆ.2 ಮೂಲಕ ಕಟ್ಟಲಾಗುತ್ತದೆ , ಪಾಲಿಸಿ ಬಗ್ಗೆ ಆನ್ ಲೈನ್ ನಲ್ಲಿ ಮಾಹಿತಿ ಸಿಗುವುದಿಲ್ಲ, ನಿಮಗೆ ಮಾಹಿತಿ ಬೇಕಿದ್ದರೆ ಮಾಹಿತಿ ಹಕ್ಕು ಮೂಲಕ ಪಡೆದುಕೊಳ್ಳಿ ಎಂದು ಎ.ಎಸ್‌. ಐ.ಹಾಗೂ ಸಿಬ್ಬಂದಿ ತಿಳಿಸಿದರು.

ಎರಡು ದಿನಗಳ ಹಿಂದೆ ಕೂಡ ನಡೆದಿದೆ ವಾಗ್ವಾದ
ಕಳೆದ ಎರಡು ದಿನಗಳ ಹಿಂದೆ ಇದೇ ಎ.ಎಸ್.ಐ.ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ. ಬಿಸಿರೋಡಿನ ಜೆರಾಕ್ಸ್ ಅಂಗಡಿ ಮಾಲಕರೋರ್ವರು ಕೈಕಂಬ ಕಡೆಯಿಂದ ಕಾರಿನಲ್ಲಿ ಬರುವಾಗ ಸೀಟ್ ಬೆಲ್ಟ್ ಹಾಕದೆ ಮೊಬೈಲ್ ಬಳಸಿಕೊಂಡು ಬಂದಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಎ.ಎಸ್.ಐ.ಜನಾರ್ದನ ಅವರು ಕಾರು ಚಾಲಕನಿಗೆ ಪೋನ್ ಮಾಡಿ ದಂಡ ಕಟ್ಟುವಂತೆ ಸೂಚಿಸಿದರು. ಚಾಲಕ ನಾನು ಜೆರಾಕ್ಸ್ ಅಂಗಡಿಯಲ್ಲಿರುವುದಾಗಿ ತಿಳಿಸಿ ಅಂಗಡಿಗೆ ಬನ್ನಿ ದಂಡ ಕೊಡುತ್ತೆನೆಂದು ತಿಳಿಸಿದ್ದಾರೆ. ಎ.ಎಸ್.ಐ.ಅವರು ಅಂಗಡಿಗೆ ಬಂದು ಒಂದು ಸಾವಿರ ದಂಡ ಕಟ್ಟುವಂತೆ ತಿಳಿಸಿದಾಗ ಅಷ್ಟೊಂದು ಹಣ ನನ್ನ ಬಳಿ ಇಲ್ಲ ವ್ಯಾಪಾರ ಏನು ಇಲ್ಲ ಅಂದಿದ್ದಕ್ಕೆ 500 ರುಪಾಯಿ ನೀಡಿ ಎಂದು ಕೇಳಿದ್ದಾರೆ. ಅಷ್ಟು ಹಣ ಇಲ್ಲ ಎಂದ ಅವರು 200 ರೂಪಾಯಿ ನೀಡಿದ್ದಾರೆ.
ದಂಡದ ರೂಪದಲ್ಲಿ ಪಡೆದುಕೊಂಡ ಹಣಕ್ಕೆ ಯಾವುದೇ ರಶೀದಿ ನೀಡದ .ಎಎಸ್.ಐ.ಅವರು ಬಳಿಕ ಕೈಕುಂಜೆ ರಸ್ತೆಯಲ್ಲಿ ನಿಯಮಬಾಹಿರವಾಗಿ ಸಂಚಾರ ಮಾಡಿದ ವಾಹನಗಳಿಗೆ ದಂಡ ಹಾಕಿದ್ದಾರೆ. ಕೆಲವರಿಗೆ ದಂಡ ನೀಡಿದ್ದಕ್ಕಾಗಿ ರಶೀದಿ ನೀಡಿದ್ದರೆ ಇನ್ನು ಕೆಲವರಿಗೆ ನೀಡಿಲ್ಲವಂತೆ, ಅದಲ್ಲದೆ ಅಂಗಡಿ ಬಾಗಿಲಿನಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೂ ದಂಡ ಕಟ್ಟುವಂತೆ ನೋಟೀಸ್ ನೀಡಿದಾಗ ಅಲ್ಲಿ ಸೇರಿದ್ದ ಸಾರ್ವಜನಿಕರ ಹಾಗೂ ಎ.ಎಸ್.ಐ.ನಡುವೆ ದೊಡ್ಡ ರಾದ್ದಾಂತವೇ ನಡೆದಿತ್ತು. ಅದಾದ ಎರಡೇ ದಿನದಲ್ಲಿ ಮತ್ತೆ ಅದೇ ಆಸುಪಾಸಿನಲ್ಲಿ ಮತ್ತೆ ವಾಗ್ವಾದ ನಡೆದಿದೆ.