ಈ ವರ್ಷದ ಪದವಿ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಂಗಳೂರು ನಗರದ ಕಾಲೇಜಿನಲ್ಲಿ ನಡೆಸುವಂತೆ ಕುಲಪತಿಗಳಿಗೆ ಒತ್ತಾಯಿಸಿದ ಮಾಜಿ ಸಿಂಡಿಕೆಟ್ ಸದಸ್ಯ ಎಸ್.ಆರ್ ಹರೀಶ್ ಆಚಾರ್ಯ – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳ ಗಂಗೋತ್ರಿಯ ಕೊಣಾಜೆ ಕ್ಯಾಂಪಸ್ಸಿನಲ್ಲಿ ಈ ಸಾಲಿನ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ನಡೆಸಲು ನಿರ್ಧರಿಸಿದ್ದು, ಮೌಲ್ಯಮಾಪಕ ಅಧ್ಯಾಪಕರು ತಮಗೆ ಸಮಯವಕಾಶ ಸಿಕ್ಕಾಗ ಕೊಣಾಜೆಗೆ ಬಂದು ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳುವಂತೆ ತೀರ್ಮಾನಿಸಿತ್ತು.
ಆದರೆ ವಿಶ್ವವಿದ್ಯಾನಿಲಯವು ಮೌಲ್ಯಮಾಪನ ಕಾರ್ಯವನ್ನು ತಾನು ಅಳವಡಿಸಿಕೊಂಡಿರುವ ನೀತಿ ನಿಯಮಗಳಡಿಯಲ್ಲಿಯೇ ನಡೆಸಬೇಕು ಮತ್ತು ಮಂಗಳೂರು ನಗರದ ಯಾವುದಾದರೂ ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೆಟ್ ಸದಸ್ಯರಾದ ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಅವರು ಕುಲಪತಿಗಳನ್ನು ಒತ್ತಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ತಾನು ಅಳವಡಿಸಿಕೊಂಡಿರುವ ಮೌಲ್ಯಮಾಪನ ನೀತಿಯ ಅಡಿಯಲ್ಲಿ ಇಲ್ಲಿಯವರೆಗೆ ನಡೆಸುತ್ತಿದೆ. ಮೌಲ್ಯಮಾಪನ ಕಾರ್ಯವು ಪರೀಕ್ಷಾ ಮಂಡಳಿಯ ಅಧ್ಯಕ್ಷರ ಕಡ್ಡಾಯ ಉಪಸ್ಥಿತಿಯಲ್ಲಿ ಹಾಗೂ ವಿಷಯವಾರು ಮುಖ್ಯಸ್ಥರು ಮತ್ತು ಉಪ ಮುಖ್ಯಸ್ಥರ ನೇರ ಹೊಣೆಗಾರಿಕೆಯ ನಿಯಂತ್ರಣದಲ್ಲಿ ನಡೆಯಬೇಕು ಎಂಬುದು ಮೌಲ್ಯಮಾಪನ ನೀತಿಯಾಗಿದೆ. ಅಲ್ಲದೆ ಈ ಮೌಲ್ಯಮಾಪನ ಕಾರ್ಯವು ನಿರಂತರತೆಯಿಂದ ಕೂಡಿರಬೇಕು. ಅಧ್ಯಾಪಕರು ತಮ್ಮ ತಮ್ಮ ಸಮಯವಕಾಶದಂತೆ ಮೌಲ್ಯಮಾಪನ ಕಾರ್ಯ ಮಾಡಿದರೆ ಇದೆಲ್ಲಾ ಹೇಗೆ ಸಾಧ್ಯ? ವಿವಿಯ ಮೌಲ್ಯಮಾಪನಾ ಪ್ರಕ್ರಿಯೆಯು ತನ್ನದೇ ಆದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಹೊಂದಿದೆ.
ಆದರೆ ತಮ್ಮ ಮೂಗಿನ ನೇರಕ್ಕೆ ಬೇಕಾದಂತೆ ಮೌಲ್ಯಮಾಪನ ನೀತಿಯನ್ನು ಬದಲಾಯಿಸುವುದರಿಂದ ವಿಶ್ವವಿದ್ಯಾನಿಲಯದ ಮಹತ್ವ ಮತ್ತು ಅದರ ಘನತೆಗೆ ಕುಂದುಂಟಾಗುತ್ತದೆ ಎಂದು ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಹೇಳಿದ್ದಾರೆ.
ಆದುದರಿಂದ ಪರೀಕ್ಷಾ ಮೌಲ್ಯಮಾಪನ ವಿಧಿನಿಯಮಗಳ ಪ್ರಕಾರ ಕಡ್ಡಾಯವಾಗಿ ಪರೀಕ್ಷಾ ಮಂಡಳಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ವಿಷಯವಾರು ಮುಖ್ಯಸ್ಥರು ಮತ್ತು ಉಪಮುಖ್ಯಸ್ಥರ ನೇರ ಹೊಣೆಗಾರಿಕೆಯ ನಿಯಂತ್ರಣದಲ್ಲಿ ಮೌಲ್ಯಮಾಪನ ಕಾರ್ಯವನ್ನು ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮೌಲ್ಯಮಾಪನ ಕಾರ್ಯವನ್ನು ವಿಶ್ವವಿದ್ಯಾನಿಲಯವು ಕೊಣಾಜೆ ಕ್ಯಾಂಪಸ್ ಕೇಂದ್ರೀಕೃತವಾಗಿ ನಡೆಸಿದರೆ ಆರ್ಥಿಕವಾಗಿಯೂ, ಪ್ರಾಯೋಗಿಕವಾಗಿಯೂ ಕಾರ್ಯಸಾಧುವಲ್ಲ. ದೂರದ ಪ್ರದೇಶಗಳಿಂದ ಬರುವ ಅಧ್ಯಾಪಕರು ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಂಗಳೂರು ನಗರದ ಹೊರಭಾಗದಲ್ಲಿರುವ ಕೊಣಾಜೆಗೆ ಬಂದು ಮೌಲ್ಯಮಾಪನ ಕಾರ್ಯವನ್ನು ಮಾಡುವುದು ಅಧ್ಯಾಪಕ ಬಂಧುಗಳಿಗೆ ಅನಾವಶ್ಯಕ ತೊಂದರೆ ಉಂಟು ಮಾಡುವುದು ಮಾತ್ರವಲ್ಲದೆ ವಿಶ್ವವಿದ್ಯಾನಿಲಯಕ್ಜೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ರೂಪದಲ್ಲಿ ಆರ್ಥಿಕ ಹೊರೆಯನ್ನೂ ಉಂಟುಮಾಡುತ್ತದೆ. ಆದುದರಿಂದ ತಕ್ಷಣವೇ ಮಂಗಳೂರು ವಿಶ್ವವಿದ್ಯಾನಿಲಯವು ಉದ್ದೇಶಿತ ಈ ಪ್ರಸ್ತಾವಣೆಯನ್ನು ಕೈಬಿಟ್ಟು ಮಂಗಳೂರು ನಗರದ ಯಾವುದಾದರೂ ಕಾಲೇಜಿನಲ್ಲಿ ಈ ಸಾಲಿನ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳÀನ್ನು ಒತ್ತಾಯಿಸಿದ್ದಾರೆ.