ಪುತ್ತೂರು ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಭಾರತ್ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ನೇತೃತ್ವದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024 ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು : ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಭಾರತ್ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ನೇತೃತ್ವದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024 ಕಾರ್ಯಕ್ರಮವು “ನೀವು ರಸ್ತೆ ಸುರಕ್ಷತಾ ಹೀರೋ ಆಗಿರಿ” ಎನ್ನುವ ಧ್ಯೇಯ ವಾಕ್ಯದೊಂದಿಗೆ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರು ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ರಸ್ತೆ ಸುರಕ್ಷತೆಯ ಜಾಗೃತಿ ಕುರಿತು ಮಾತನಾಡಿದ ಅವರು, “ನಿಮ್ಮ ಆಟೋದಲ್ಲಿ ಬರುವ ಒಂದು ಮಗು ಮುಂದಿನ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿ ಆಗಿರಬಹುದು” ಆದ್ದರಿಂದ ಪೋಷಕರು ಮಕ್ಕಳನ್ನು ಕರೆತರುವ ವಾಹನದ ಚಾಲಕರ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ವಾಹನವನ್ನು ರಸ್ತೆ ನಿಯಮ ಉಲ್ಲಂಘನೆ ಮಾಡದೆ ಚಲಾಯಿಸಿ ನಿಮ್ಮನ್ನು, ನಿಮ್ಮನ್ನು ನಂಬಿರುವ ಕುಟುಂಬವನ್ನು ರಕ್ಷಿಸಿ ಎಂದರು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್, ಪುತ್ತೂರು ನಗರ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸ್ಕರಿಯ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿದೂಷಿ ನಯನಾ ವಿ ರೈ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾದ ಸತೀಶ್ ಆರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಸ್ಮಾ ಹಾಗೂ ಗೈಡ್ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಬೆಥನಿ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ವಾಮಂಜೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಟ್ಲ್ ಫ್ಲವರ್ ಹಾಗೂ ಬೆಥನಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳ ವತಿಯಿಂದ ನಡೆದ ನೃತ್ಯ ರೂಪಕವನ್ನು ರಚಿಸಿ ನಿರ್ದೇಶಿಸಿದ ಶಾಲಾ ಶಿಕ್ಷರಾದ ಬಾಲಕೃಷ್ಣ ಪೊರ್ದಾಲ್, ನೃತ್ಯ ಸಂಯೋಜನೆ ಮಾಡಿದ ವಿದೂಷಿ ಸ್ವಸ್ತಿಕಾ ಆರ್ ಶೆಟ್ಟಿ ಯವರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಹಾಡು ರಚಿಸಿದ ಸಾಹಿತಿ, ಸಂಜಯ ನಗರ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ರಮೇಶ್ ಉಳಯರನ್ನು ಅವರ ಶಾಲೆಗೆ ತೆರಳಿ ಸನ್ಮಾನಿಸಲಾಯಿತು.ಬಳಿಕ ಜನಸ್ನೇಹಿ ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಯವರನ್ನು ಸನ್ಮಾನಿಸಲಾಯಿತು.
ಶಾಲಾ ಗೈಡ್ಸ್ ವಿದ್ಯಾರ್ಥಿನಿಯರಾದ ಕು. ದ್ರಿಶಾ, ಕು. ಆರಾಧನಾ, ಕು. ತನ್ವಿ ಹಾಗೂ ಕು. ಬೃಂದಾ ಪ್ರಾರ್ಥಿಸಿ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ರವರು ಸ್ವಾಗತಿಸಿ, ಕಬ್ ಶಿಕ್ಷಕಿ ಶ್ರೀಮತಿ ದಿವ್ಯ ವಂದಿಸಿ, ಸ್ಕೌಟ್ ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.