ಪುತ್ತೂರು ಪಡುಮಲೆ ಶ್ರೀಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ – ಕಹಳೆ ನ್ಯೂಸ್
ಪುತ್ತೂರು : ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಿತು.
ಶ್ರೀ ಕ್ಷೇತ್ರ ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ಜ.12ರಿಂದ ಜ.14ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು.
ಜ.12ರಂದು ಕ್ಷೇತ್ರಕ್ಕೆ ಬಂದ ಹಸಿರು ಹೊರಕಾಣಿಕೆಯನ್ನು ಉಗ್ರಾಣಕ್ಕೆ ತುಂಬಿಸಿಕೊಳ್ಳುವ ಮೂಲಕ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಸಂಜೆ ಬಿರಮೂಲೆ ರಾಮ ಭಟ್, ನಾರಾಯಣ ಭಟ್, ಪಟ್ಟೆ ಕೃಷ್ಣ ರೈ ಕುದ್ಯಾಡಿ ಅವರ ಉಪಸ್ಥಿತಿಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಜೆ 6ರಿಂದ ಬೆಟ್ಟಂಪಾಡಿಯ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಪಟ್ಟೆ ಹಾಗೂ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮ ನಡೆದು, ಬಳಿಕ ವೀರಮಂಗಲ ಪಿಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಲಾವಿದರಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶಿಸಲಾಯಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಜ.13ರಂದು ಬೆಳಿಗ್ಗೆ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ತೀರ್ಥ ತರಲಾಯಿತು. ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನೇರವೇರಿತು. ತದನಂತರ ಶ್ರೀಮತಿ ಮಧುಮಿತಾ ಪ್ರವೀಣ್ ಕುಮಾರ್ ಪಡುಮಲೆ ಅವರಿಂದ ವೀಣಾವಾದನ ಕಾರ್ಯಕ್ರಮ ಹಾಗೂ ಸಂಜೆ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ನಡೆಯಿತು.
ರಾತ್ರಿ 7ರಿಂದ ಕ್ಷೇತ್ರದಲ್ಲಿ ಶ್ರೀ ದೇವರ ಉತ್ಸವ ಬಲಿ, ನೃತ್ಯ ಬಲಿ, ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಭೂತ ಬಲಿ ಹಾಗೂ ಅನ್ನ ಪ್ರಸಾದ ವಿತರಣೆ ನಡೆಯಿತು.
ಇನ್ನು ಜ.14ರಂದು ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ದರ್ಶನ ಬಲಿ ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಬಳಿಕ ಮಹಾಪೂಜೆ ನಡೆಯಿತು. ರಾತ್ರಿ 8ರಿಂದ ಕ್ಷೇತ್ರದಲ್ಲಿ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ. ಸಂಜೆ 6ರಿಂದ ಕ್ಷೇತ್ರದ ಭಕ್ತವೃಂದ ಮತ್ತು ಕರಸೇವಕರ ಪ್ರಾಯೋಜಕತ್ವದಲ್ಲಿ ನುರಿತ ಕಲಾವಿದ ಕೂಡುವಿಕೆಯಲ್ಲಿ ಮಕರಾಕ್ಷ ಪುರುಷಾಮೃಗ ಮೈಂದದಿವಿದ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.