Pocso case: ಪೋಕ್ಸೋ ಪ್ರಕರಣದಲ್ಲಿ ಆರೋಪಿ ಖುಲಾಸೆ ಮಂಗಳೂರು ಪೋಕ್ಸೋ ವಿಶೇಷ ಕೋರ್ಟ್ ಆದೇಶ – ಕಹಳೆ ನ್ಯೂಸ್
ಕಳೆದ ವರ್ಷ 2023 ರಲ್ಲಿ ಬಂಟ್ವಾಳ ಗ್ರಾಮೀಣ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣ(Pocso case)ಕ್ಕೆ ಸಂಬಂಧಿಸಿದಂತೆ ಆರೋಪಿ ಶೇಖರ್ ಪೂಜಾರಿ ಎಂಬವರನ್ನು ಆರೋಪ ಮುಕ್ತಗೊಳಿಸಿ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಮಂಗಳೂರಿನ ವಿಶೇಷ ಪೋಕ್ಸೊ ಮತ್ತು ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕುರಿ ಎಂಬಲ್ಲಿ ವಾಸವಾಗಿದ್ದ ಶೇಖರ್ ಪೂಜಾರಿ ತನ್ನ ನೆರೆಯ ಮನೆಯ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು.
ಆರೋಪಿ ಅಪ್ರಾಪ್ತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬುದು ತನಿಖೆ ಮತ್ತು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ ಎಂದು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಿದ್ದರು.
ಆದರೆ ಅಭಿಯೋಜನೆಯು ಅಪರಾಧವನ್ನು ಸಾಬೀತುಮಾಡಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಮಾನ್ಯ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿತು.
ಆರೋಪಿಯ ಪರವಾಗಿ ಮಂಗಳೂರಿನ ಲೆಕ್ಸ್ ಜ್ಯೂರೀಸ್ ಲಾ ಚೇಂಬರ್ ಇದರ ಮಹಮ್ಮದ್ ಅಸ್ಗರ್ ಮುಡಿಪು, ನಿರೀಕ್ಷ, ಮೊಹಮ್ಮದ್ ಇರ್ಷಾದ್ ಸಖಾಫಿ ಮೊಂಟೆಪದವು ರವರು ವಾದಿಸಿದ್ದರು.