ತ್ರಿಶ್ಶೂರ್(ಕೇರಳ): ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜನವರಿ 17) ಬೆಳಗ್ಗೆ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಬಿಳಿ ಪಂಚೆ ಮತ್ತು ಶಾಲು ಧರಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಉಡುಪನ್ನು ಬದಲಾಯಿಸಿ, ನಟ, ರಾಜಕಾರಣಿ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನೂತನ ವಧು, ವರನಿಗೆ ಮಾಲೆಯನ್ನು ಹಸ್ತಾಂತರಿಸಿದ್ದು, ನಂತರ ವಧ, ವರ ಪರಸ್ಪರ ಹಾರವನ್ನು ಕೊರಳಿಗೆ ಹಾಕಿರುವುದಾಗಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಟಿವಿ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ.
ಸುರೇಶ್ ಗೋಪಿ ಪುತ್ರಿಯ ವಿವಾಹ ಸಮಾರಂಭದಲ್ಲಿ ಮಲಯಾಳಂ ಸಿನಿಮಾ ರಂಗದ ಸೂಪರ್ ಸ್ಟಾರ್ ಗಳಾದ ಮಮ್ಮುಟ್ಟಿ, ಮೋಹನ್ ಲಾಲ್, ದಿಲೀಪ್ ಸೇರಿದಂತೆ ಹಲವರು ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲ್ಲರ ಜತೆ ಮಾತನಾಡಿರುವುದಾಗಿ ವರದಿ ವಿವರಿಸಿದೆ.
ನೂತನ ವಧು-ವರನಿಗೆ ಪ್ರಧಾನಿ ಮೋದಿ ಅವರು ಸಿಹಿ ತಿನ್ನಿಸಿ ಆಶೀರ್ವದಿಸಿರುವುದಾಗಿ ವರದಿ ತಿಳಿಸಿದೆ. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ದೇವಾಲಯದ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.