Sunday, January 19, 2025
ಉಡುಪಿಸುದ್ದಿ

ಉಡುಪಿ : ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಹಾಗೂ ಕರವೇ ವತಿಯಿಂದ ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಪ್ರತಿಭಟನಾ ಧರಣಿ– ಕಹಳೆ ನ್ಯೂಸ್

ಉಡುಪಿ : ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಅಪಘಾತ ನಡೆಸಿದ ಚಾಲಕರಿಗೆ 10ಲಕ್ಷ ರೂ. ದಂಡ, 7 ವರ್ಷದ ಸಜೆ ಎಂಬ ನೂತನ ಕಾನೂನಿನ ವಿರುದ್ಧ ಹೆಜಮಾಡಿ ಟೋಲ್ ಗೇಟ್‌ ಬಳಿ ಪ್ರತಿಭಟನಾ ಧರಣಿ ನಡೆಸಲಾಯಿತು.

ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಉಡುಪಿ ಜಿಲ್ಲಾಧ್ಯಕ್ಷ ಮನ್ಸೂರ್ ಅಖ್ತರ್ ಮಾತನಾಡಿ ಕೇಂದ್ರ ಸರ್ಕಾರ ಅವೈಜ್ಞಾನಿಕ ಕಾನೂನು ಒಂದನ್ನು ತರಲು ಹೊರಟಿದೆ. ಇದು ಮನುಷ್ಯ ದ್ವೇಷಿ ಹಾಗೂ, ಬಡ ಚಾಕಲರ ಹೊಟ್ಟೆಗೆ ಒಡೆಯುವ ಕಾನೂನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಚಾಲಕ ಬೇಕು ಬೇಕೆಂದು ಅಪಘಾತಗಳನ್ನು ಮಾಡುವುದಿಲ್ಲ. ಯಾಕೆಂದರೆ ಅವನಿಗೂ ಕುಟುಂಬ ಎಂಬುದು ಇರುತ್ತದೆ. ಆಕಸ್ಮಿಕವಾಗಿ ನಡೆದು ಹೋಗುವ ಅಪಘಾತಕ್ಕೆ ಚಾಲಕರನ್ನೇ ಗುರಿಯಾಗಿಸಿ ಕಾನೂನು ತರಲು ಹೊರಟಿರುವುದು ಅಕ್ಷಮ್ಯ ಎಂದು ದೂರಿದರು. ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಅದರ ಒಳಗಾಗಿ ಮನುಷ್ಯ ಧ್ಚೇಷಿ ಕಾನೂನನ್ನು ಹಿಂಪಡೆಯಬೇಕು.‌ ಇಲ್ಲವಾದರೆ ಎಲ್ಲಾ ಚಾಲಕರನ್ನು ಒಗ್ಗೂಡಿಸಿಕೊಂಡು ಉಡುಪಿ ಬಂದ್ ಮಾಡಿ ಉಗ್ರ ಹೋರಾಟವನ್ನು ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕರವೇ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯಾದ ಆನ್ಸರ್ ಅಹಮದ್ ಮಾತನಾಡಿ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ತೀವ್ರವಾಗಿ ವಿರೋದಿಸುತ್ತೇವೆ. ಸರಕಾರಕ್ಕೆ ಇನ್ನೂ ಇದರ ತೀವ್ರತೆಯ ಪರಿಣಾಮ ತಟ್ಟಿಲ್ಲ, ಈ ಮದ್ಯೆ ಸರಕಾರ ಜನರಿಗೆ ಸುಳ್ಳು ಮಾಹಿತಿಯನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇಂದು ಶಾಂತಿಯುತ ಹೋರಾಟ ನಡೆಸಿ ಜನ ವಿರೋಧಿ ನೀತಿಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಜನವಿರೋಧಿ ನೀತಿಯನ್ನು ಸರಕಾರ ಹಿಂಪಡೆದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಉಡುಪಿ ಖಜಾಂಚಿ ಅಬ್ದುಲ್ ಮಜೀದ್ ಮಾತನಾಡಿ ಆಕಸ್ಮಿಕ ಘಟನೆಗೆ ಚಾಲಕರನ್ನು ಹೊಣೆಗಾರರನ್ನಾಗಿಸುವ ಕೇಂದ್ರದ ಕಾನೂನು ಒಪ್ಪಲು ಸಾಧ್ಯವಿಲ್ಲ. 10ಲಕ್ಷ ರೂ. ಇದ್ದರೆ ನಾವು ಯಾಕೆ ದಿನಕ್ಕೆ ಸಾವಿರ ರೂ.ಗೆ ದುಡಿಯಬೇಕು. ನಮ್ಮದೇ ಸಂಸ್ಥೆಗಳನ್ನು ನಡೆಸುತ್ತಿದ್ದೆವು ಎಂದರು. ಒಂದು ವೇಳೆ ಚಾಲಕರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸಿದರೆ, ಎಲ್ಲಾ ಚಾಲಕರು ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ನಮ್ಮ ರಾಜ್ಯ ಸಮಿತಿಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಯಾವ ಲಾರಿಗಳ ಮಾಲಕರು ಚಾಲಕರ ಜೀವನ ಭದ್ರತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೋ ಅಂತಹಾ ಲಾರಿಗಳು ಮಾತ್ರ ಓಡಾಟ ನಡೆಸಲಿವೆ ಎಂದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್ ಗೇಟ್ ಬಳಿ ನೂರಾರು ಲಾರಿಗಳು ಬೀಡು ಬಿಟ್ಟಿದ್ದವು. ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಭೇಟಿ ನೀಡಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಚಾಲಕರು ಎಂದ ಮೇಲೆ ಬಸ್, ಲಾರಿ ಎಂಬ ಬೇಧವಿಲ್ಲ‌. ಕೇಂದ್ರ ಸರ್ಕಾರ ಚಾಲಕರ ಬದುಕಿಗೆ ಮರಣ ಶಾಸನ ಬರೆಯಲು ಹೊರಟಿದ್ದರೆ, ಬಸ್ ಚಾಲಕರು ಇತ್ತ ಗಮನ ಹರಿಸುತ್ತಿಲ್ಲ. ಈ ಕಾನೂನು ಲಾರಿ ಚಾಲಕರಿಗೆ ಮಾತ್ರ ಎಂದು ಅವರು ಪ್ರತಿಭಟನೆಗಳಿಗೆ ಮುಂದಾಗುತ್ತಿಲ್ಲ. ಕಾನೂನು ಜಾರಿಯಾದರೆ, ಅದರ ಬಿಸಿ ಅವರಿಗೂ ತಟ್ಟಲಿದೆ. ಅದಕ್ಕೂ ಮುನ್ನ ಬಸ್ ಚಾಲಕ, ಮಾಲಕರು ಎಚ್ವೆತ್ತುಕೊಳ್ಳಬೇಕು.

ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಂಚಾಲಕರಾದ ಸುಧೀರ್ ಪೂಜಾರಿ, ಎಂ ಎಸ್ ಸಯ್ಯದ್ ನಿಜಾಮ್, ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ನ ಪದಾಧಿಕಾರಿಗಳು ಕರವೇ ಮುಖಂಡರು ಉಪಸ್ಥಿತರಿದ್ದರು