ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ರಾಮಂಜನೇಯ ಸ್ಮರಣೆ – ಕಹಳೆ ನ್ಯೂಸ್
ಪುತ್ತೂರು : ಶ್ರೀರಾಮ ಮತ್ತು ಹನುಮಂತನದ್ದು ಅವಿನಾಭಾವ ಸಂಬಂಧ. ಸ್ನೇಹ ಎಂಬ ಬಂಧನವು ಚಿರಕಾಲ ಉಳಿಯುವಂತಹದ್ದು. ಸುಗ್ರೀವನ ಸಚಿವನಾದ ಹನುಮಂತನು ರಾಮನ ಬಂಟನಾಗಿದ್ದು ನಿಸ್ವಾರ್ಥ ಸ್ನೇಹದ ಮೂರ್ತ ರೂಪವೆಂದರೆ ತಪ್ಪಾಗಲಾರದು, ಅದರ ಜೊತೆಗೆ ಶಕ್ತಿ- ಯುಕ್ತಿಯ ಸಮಾಗಮವೇ ಆಂಜನೇಯ ಎಂದು ಉಡುಪಿ ಸಾಲಿಗ್ರಾಮದ ಕಾರ್ತಟ್ಟು ಗಮಕ ವಿದ್ವಾಂಸಕ ಕೋಟ ಶ್ರೀಕೃಷ್ಣ ಅಹಿತಾನಲಃ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಅಧ್ಯಾಪಕ ಮತ್ತು ಅದ್ಯಾಪಕೇತರ ಸಂಘ ಹಾಗೂ ಗ್ರಾಮ ವಿಕಾಸ ಮತ್ತು ಸ್ನಾತಕೋತ್ತರ ವಿಭಾಗಗಳ ಆಶ್ರಯದಲ್ಲಿ ನಡೆದ ‘ರಾಮಂಜನೇಯ ಸ್ಮರಣೆ’ ಎಂಬ ವಿಷಯದ ಕುರಿತು ಮಾತನಾಡಿದರು.
ಹನುಮಂತನೊಬ್ಬ ನಿಷ್ಠಾವಂತ ಭಕ್ತ, ಶ್ರೀರಾಮನ ನಂಬಿಕಸ್ಥ. ಸೀತೆಯನ್ನು ತನ್ನ ತಾಯಿ ಎಂದು ಪರಿಗಣಿಸಿ, ಮಾತೆಯನ್ನು ಅರಸಿ ಲಂಕೆಯ ಅಶೋಕವನಕ್ಕೆ ತೆರಳಿ ಸೀತೆಗೆ ಧೈರ್ಯವನ್ನು ತುಂಬಿದವನೀತ. ತನ್ನನ್ನು ಕೇವಲ ಕಪಿ ಎಂದು ಅಪಹಾಸ್ಯ ಮಾಡಿದವರ ಮುಂದೆ ಇಡೀ ಲಂಕೆಗೆ ಬೆಂಕಿ ಹಚ್ಚಿ ಬಲ ಪ್ರದರ್ಶನ ಮಾಡುವುದರ ಜೊತೆಗೆ ಸೀತಾಮಾತೆಗೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಂಡ ಎಂದು ನುಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯೆ ಶೋಭಾ ಕೊಳತ್ತಾಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿ ಕೃಷ್ಣ ಕೆ ಎನ್, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಪರೀಕ್ಷಾಂಗ ಕುಲಸಚಿವ ಹಾಗೂ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಶ್ರೀಧರ ಹೆಚ್ ಜಿ, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಬೋಧಕ ಮತ್ತು ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉದ್ಘಾಟನೆ:
ಶ್ರೀ ರಾಮೋತ್ಸವದ ಎಂಟನೇ ದಿನದ ಕಾರ್ಯಕ್ರಮವನ್ನು ಕಾಲೇಜಿನ ಪರಿಚಾರಕಿ ಗಿರಿಜಾ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ಶ್ರೀರಾಮ ಭಾವಪೂಜೆಯ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು.
ಸನ್ಮಾನ ಕಾರ್ಯಕ್ರಮ:
ಈ ಸಂದರ್ಭದಲ್ಲಿ ಉಡುಪಿ ಸಾಲಿಗ್ರಾಮದ ಕಾರ್ತಟ್ಟು ಗಮಕ ವಿದ್ವಾಂಸಕ ಕೋಟ ಶ್ರೀಕೃಷ್ಣ ಅಹಿತಾನಲಃ, ಕಾಲೇಜಿನ ಪರಿಚಾರಕಿಯರಾದ ಹೇಮಾವತಿ ಮತ್ತು ಗಿರಿಜಾ ಇವರಿಗೆ ಗೌರವ ಸಮರ್ಪಿಸಲಾಯಿತು.
ಗಮಕ ವಾಚನ:
ಶ್ರೀರಾಮೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ಉಡುಪಿ ಸಾಲಿಗ್ರಾಮದ ಕಾರ್ತಟ್ಟು ಗಮಕ ವಿದ್ವಾಂಸಕ ಕೋಟ ಶ್ರೀಕೃಷ್ಣ ಅಹಿತಾನಲಃ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಚಂದನಾ ಅವರು ಮೂರು ಪ್ರಸಂಗಳ ಮೂಲಕ ರಾಮಾಂಜನೇಯರ ಸ್ನೇಹ ಭಾವ ಬಂಧನದ ನಾಂದಿ ಯಾವರೀತಿಯಾಯಿತು ಎಂಬುದಾಗಿ ಅರ್ಥಪೂರ್ಣವಾಗಿ ವಿವರಿಸಿದರು.