ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಭಾಷಣ ಆರಂಭದಲ್ಲಿ ಅವರು ‘ವಿಕಸಿತ ಭಾರತ 2047’ ಎಂಬುದನ್ನು ಪ್ರಸ್ತಾಪಿಸಿದ್ದಾರೆ.
ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿಗೆ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಾಗುತ್ತದೆ.
ಗುರುವಾರ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ‘ವಿಕಸಿತ ಭಾರತ 2047’ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. “ನಮ್ಮ ಸರ್ಕಾರ ಭಾರತವನ್ನು ವಿಕಸಿತ ಭಾರತ 2047 ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದೆ. ನಮ್ಮ ಗಮನ ಎಲ್ಲರ ಜೊತೆಗೆ ಎಲ್ಲರ ವಿಕಾಸ” ಎಂದು ಹೇಳಿದರು.
ಡಿಸೆಂಬರ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಘೋಷಣೆ ‘ವಿಕಸಿತ ಭಾರತ 2047’ ಈ ಹೆಸರಿನಲ್ಲಿ ಈಗಾಗಲೇ ದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಗ್ರಾಮ ಮಟ್ಟದ ತನಕ ಜನರಿಗೆ ತಲುಪಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, “ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮ ಯುವಜನರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ವಿಕಸಿತ್ ಭಾರತ್ 2047 ಯುವಜನತೆಯ ಧ್ವನಿ. ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು” ಎಂದು ಕರೆಯನ್ನು ನೀಡಿದ್ದರು.
“ವಿಕಸಿತ ಭಾರತ್ ಅಭಿಯಾನ ಮೂಲಕ ನಮ್ಮ ಕನಸನ್ನು ನನಸು ಮಾಡಿಕೊಳ್ಳಲು ಭಾರತದ ಯುವ ಶಕ್ತಿಯಲ್ಲಿ ಅಪಾರ ನಂಬಿಕೆಯಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮ ಯುವಕರನ್ನು ಸಂಯೋಜಿಸುವ ಗುರಿಯನ್ನು ಹೊಂದಿರುವ ಈ ಅಭಿಯಾನಕ್ಕೆ ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು” ಎಂದು ಮೋದಿ ಹೇಳಿದ್ದರು.
ಪ್ರಧಾನಮಂತ್ರಿಗಳು ‘ವಿಕಸಿತ ಭಾರತ @ 2047’ಕ್ಕೆ ಸಂಬAಧಿಸಿದAತೆ ‘ವಾಯ್ಸ್ ಆಫ್ ಯೂತ್’ ಎಂಬ ಕಾರ್ಯಕ್ರಮಕ್ಕೆ ಸಹ ಚಾಲನೆ ನೀಡಿದ್ದಾರೆ. ಇದರ ಅಂಗವಾಗಿ ದೇಶಾದ್ಯಂತ ರಾಜಭವನಗಳಲ್ಲಿ ಆಯೋಜಿಸಲಾದ ಕಾರ್ಯಾಗಾರಗಳಲ್ಲಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಬೋಧಕವರ್ಗದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದರು.
ದೇಶದ ರಾಷ್ಟ್ರೀಯ ಯೋಜನೆಗಳು, ಆದ್ಯತೆಗಳು ಮತ್ತು ಗುರಿಗಳನ್ನು ರೂಪಿಸುವಲ್ಲಿ ದೇಶದ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪ್ರಧಾನಿಗಳ ಆಶಯದಂತೆ ಯುವಕರ ದೃಷ್ಟಿಕೋನ, ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸಲಾಗಿದೆ.