ಪುತ್ತೂರು, ಅ 07 : ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲು ಬಂದ ಎತ್ತಿನ ಹೊಳೆ ವಿರೋಧಿ ಹೋರಾಟಗಾರರ ಮೇಲೆ ಪ್ರೆಸ್ ಕ್ಲಬ್ ಆವರಣದಲ್ಲಿ ಹಲ್ಲೆಗೆ ಮುಂದಾದ “ಸುದ್ದಿ ಬಿಡುಗಡೆ” ಪತ್ರಿಕೆಯ ಸಿಬ್ಬಂದಿಗಳಾದ 8 ಆರೋಪಿಗಳು ಶನಿವಾರ ನ್ಯಾಯಾಲಯಕ್ಕೆ ಶರಣಾದರು. ಕಳೆದ ವರ್ಷ ಮೇ 14 ರಂದು ಪ್ರಕರಣ ನಡೆದಿತ್ತು. ಜ್ಯೋತಿ ಪ್ರಕಾಶ್ ಪುಣಚ, ಸಂತೋಷ್ ಶಾಂತಿನಗರ, ಶಶಿಧರ್ ವಿ ಎನ್, ನಿಶಾ ಕಿರಣ್, ಉಮೇಶ್ ಮಿತ್ತಡ್ಕ, ಆದಿತ್ಯ, ವಸಂತ್ ಸಾಮೆತಡ್ಕ ಮತ್ತು ನಾರಾಯಣ ಅಮ್ಮುಂಜೆ ಎಂಬ 8 ಜನರು ನ್ಯಾಯಾಲಯಕ್ಕೆ ಶರಣಾದ ಆರೋಪಿಗಳು.
ಈ 8 ಜನ ಪ್ರಮುಖ ಆರೋಪಿಗಳು, ಸುದ್ದಿ ಬಿಡುಗಡೆಯ ಇತರ ಸಿಬ್ಬಂದಿಗಳ ಜೊತೆ ಸೇರಿ ಪೂರ್ವ ಯೋಜಿತವಾಗಿ, ಅಕ್ರಮ ಕೂಟ ರಚನೆ ಮಾಡಿ, ಎತ್ತಿನ ಹೊಳೆ ವಿರೋಧಿ ಹೋರಾಟ ಸಂಘಟಿಸಿದ ಯುವ ಭಾರತ್ ಸಂಘಟನೆಯ ಸದಸ್ಯರ ಮೇಲೆ ಹಲ್ಲೆ ಯತ್ನ ನಡೆಸಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಪುತ್ತೂರು ನಗರ ಸ್ಟೇಷನಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಭವನದಲ್ಲಿ ದೃಶ್ಯ ಮಾಧ್ಯಮದ ಸಿಬ್ಬಂದಿಗಳು ದಾಖಲಿಸಿದ ವಿಡಿಯೋವನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ವಿಡಿಯೋ ಸಿ.ಡಿ ಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸರು ತನಿಖೆ ನಡೆಸಿ ಪ್ರಕರಣದಲ್ಲಿ ಸತ್ಯಾಂಶ ಕಂಡು ಈ ಎಂಟು ಜನ ಆರೋಪಿಗಳ ಮೇಲೆ ದೋಷಾರೋಪಣ ಪಟ್ಟಿಯನ್ನು ಪುತ್ತೂರು ನ್ಯಾಯಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿವರ :
ಎತ್ತಿನ ಹೊಳೆ ಯೋಜನೆ ಕರಾವಳಿಗೆ ಮಾರಕ, ಇಲ್ಲಿಯ ಜಲ ಹಾಗೂ ಪರಿಸರ ಸಂಪತ್ತನ್ನು ಇದು ಹಾಳುಗೆಡವುತ್ತದೆ ಎಂದು ಆರೋಪಿಸಿ ಎತ್ತಿನ ಹೊಳೆ ವಿರೋಧಿ ಹೋರಾಟಗಾರರು ಸಂಯುಕ್ತವಾಗಿ 2016 ಮೇ 18ರಂದು ಕರಾವಳಿ ಜಿಲ್ಲೆಯಾದ್ಯಂತ ಬಂದ್ ಗೆ ಕರೆ ಕೊಟ್ಟಿದ್ದರು. ಅದಕ್ಕೆ ಪೂರಕವಾಗಿ ಮೇ 18ಕ್ಕಿಂತ ಮುಂಚೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಪ್ರತಿಭಟನೆ ಹಾಗೂ ಜಾಥಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಪುತ್ತೂರಿನ ‘ಯುವ ಭಾರತ್ ‘ ಸಂಘಟನೆಯು ಎತ್ತಿನ ಹೊಳೆ ವಿರೋದಿ ಹೋರಾಟದಲ್ಲಿ ತೊಡಗಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಜನ ಜಾಗೃತಿ ನಡೆಸುತ್ತಿತ್ತು. ಇದರ ಅಂಗವಾಗಿ ಜನ ಜಾಗೃತಿಗಾಗಿ “ನಾನು ನಿಮ್ಮ ನೇತ್ರಾವತಿ” ಎಂಬ ಕಿರು ಚಿತ್ರವನ್ನು ತಯಾರಿಸಲಾಗಿತ್ತು. ಎತ್ತಿನ ಹೊಳೆ ಯೋಜನೆಯಿಂದ ಕರಾವಳಿಗೆ ಆಗಬಹುದಾದ ಅನಾಹುತಗಳ ವಿಸ್ತೃತ ಮಾಹಿತಿ, ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮೂರೂ ಧರ್ಮದ ಧರ್ಮ ಗುರುಗಳು ಆ ಯೋಜನೆಯನ್ನು ವಿರೋಧಿಸಿ ನೀಡಿದ ಹೇಳಿಕೆಗಳನ್ನೂ ಒಳಗೊಂಡ ಕಿರು ಚಿತ್ರವನ್ನು, ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡುವ ಕಾರ್ಯಕ್ರಮ ಮೇ 14ರಂದು ನಿಗದಿಯಾಗಿತ್ತು. ಕಿರು ಚಿತ್ರ ಬಿಡುಗಡೆಗೆ ಪುತ್ತೂರಿನ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಮಾಜಿ ಬಜರಂಗದಳ ಸಂಚಾಲಕರಾದ ದಿನೇಶ್ ಜೈನ್ ಅತಿಥಿಗಳಾಗಿ ಆಗಮಿಸಿದರು.
ಕಿರು ಚಿತ್ರ ಬಿಡುಗಡೆ ಕಾರ್ಯಕ್ರಮಕ್ಕೆ ಸುದ್ದಿ ಬಿಡುಗಡೆಯ ನೂರಕ್ಕೂ ಮಿಕ್ಕಿ ಸಿಬ್ಬಂದಿಗಳು ದಾಳಿಯಿಟ್ಟು ಕಿರು ಚಿತ್ರ ಬಿಡುಗಡೆ ಮಾಡಿ ಹೊರ ಬರುತ್ತಿದ್ದ ಎತ್ತಿನ ಹೊಳೆ ವಿರೋದಿ ಹೋರಾಟಗಾರರ ಮೇಲೆ ಹಲ್ಲೆಗೆ ಯತ್ನಿಸಿದರು. ಸುದ್ದಿ ಬಿಡುಗಡೆ ಪತ್ರಿಕೆಯ ಮಹಿಳಾ ಸಿಬ್ಬಂದಿಗಳ ಸಮೇತ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರಿನ ಪತ್ರಿಕೆಯ ಸಿಬ್ಬಂದಿಗಳು ಮತ್ತು ಬಿಡಿ ವರದಿಗಾರರು ಏಕಾಏಕಿ ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡು ದಾಂಧಲೆ ಆರಂಭಿಸಿದರು.
ಪತ್ರಕರ್ತರ ದೇವಾಲಯದಲ್ಲಿಯೇ ದಾಂಧಲೆ ಮಾಡಿದ್ದರು:
ಪ್ರೆಸ್ ಕ್ಲಬ್ ಎಂದರೆ ಪತ್ರಕರ್ತರ ಪಾಲಿಗೆ ದೇವಾಲಯವಿದ್ದಂತೆ. ಅದರೆ ತಮ್ಮ ಆಕ್ರೋಶ ಹಾಗೂ ಅಸಹನೆಯನ್ನು ತೋಳ್ಬಲದ ಮೂಲಕ ತೋರಿಸಲು ಸುದ್ದಿ ಬಿಡುಗಡೆಯ ಪತ್ರಕರ್ತರು ಆಯ್ದುಕೊಂಡದ್ದು ಇದೇ ತಮ್ಮ ಪಾಲಿನ ದೇವಾಲಯವನ್ನು. 24 ವರ್ಷಗಳ ಹಿಂದೆ ಆರಂಭವಾದ ಪುತ್ತೂರು ಪ್ರೆಸ್ ಕ್ಲಬ್ ರಾಜ್ಯದ ಪತ್ರಕರ್ತರ ಸಂಘದಲ್ಲಿಯೇ ಅತ್ಯಂತ ಗೌರವ-ಆದರಕ್ಕೆ ಒಳಗಾದ ಸಂಘ. ಪುತ್ತೂರಿನ ಹಿರಿಯ ಪತ್ರಕರ್ತರು ಆರಂಭಿಸಿದ ಸಂಘವು ಈಗಲೂ ಆ ಹಿರಿಯರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿದೆ. ಅವರು ಹಾಕಿ ಕೊಟ್ಟ ಉನ್ನತ ಆದರ್ಶ, ಉತ್ಕೃಷ್ಟ ಪರಂಪರೆಯನ್ನು ಈಗಿನ ಯುವ ಪತ್ರಕರ್ತರು ಚಾಚು ತಪ್ಪದೆ ಪಾಲಿಸುತ್ತಿರುವುದೇ ಅದು ಪಡೆದಿರುವ ಗೌರವಕ್ಕೆ ಕಾರಣ.
ರಕ್ತಪಾತ ತಡೆದ ಇತರ ಪತ್ರಿಕೆಯ ಸಿಬ್ಬಂದಿಗಳು:
ದಾಂಧಲೆಯ ದಿನ ಅಲ್ಲಿದ್ದ ಇತರ ಪತ್ರಿಕೆಯ ಪತ್ರಕರ್ತರು ತೋರಿಸಿದ ಸಮಯ ಪ್ರಜ್ಞೆ, ಪ್ರಬುದ್ಧತೆ, ತೆಗೆದುಕೊಂಡ ನಿರ್ಣಯಗಳು ಪ್ರೆಸ್ ಕ್ಲಬ್ಬಿನ ಘನತೆಯನ್ನು ಇನ್ನಷ್ಟು ಹೆಚ್ಚಿಸಿತು. ಎತ್ತಿನ ಹೊಳೆ ವಿರೋದಿ ಹೋರಾಟಗಾರರು ಕಿರು ಚಿತ್ರ ಬಿಡುಗಡೆ ಮಾಡಿ ಪ್ರೆಸ್ ಕ್ಲಬ್ ಆವರಣದಿಂದ ಹೊರ ಬರುತ್ತಿದ್ದಂತೆ ಸುದ್ದಿ ಬಿಡುಗಡೆಯ ಆರೋಪಿ ಸಿಬ್ಬಂದಿಗಳು ಅವರ ಮೇಲೆ ಹಲ್ಲೆಗೆ ಮುಂದಾದರು. ಜೀವ ಬೆದರಿಕೆ ಒಡ್ಡಿದ್ದರು.ಆಗ ಅಲ್ಲಿದ್ದ ಇತರೆ ಪತ್ರಿಕೆಯ ಸಿಬ್ಬಂದಿಗಳು ಸುದ್ದಿ ಬಿಡುಗಡೆಯ ಆರೋಪಿ ಸಿಬ್ಬಂದಿಗಳನ್ನು ಆವರಣ ಪ್ರವೇಶಿಸದಂತೆ ತಡೆದು ಗೇಟ್ ಹಾಕುವ ಮೂಲಕ ಸಂಭಾವ್ಯ ರಕ್ತಪಾತವನ್ನು ತಡೆದರು.
ದಾಂಧಲೆಯ ಸಂದರ್ಭದಲ್ಲಿ ಆರೋಪಿಗಳು ಉಪಯೋಗಿಸಿದ ಪದಗಳು ನಾಗರೀಕ ಸಮಾಜ ತಲೆ ತಗ್ಗಿಸುವಂತಿತ್ತು. ಅಶ್ಲೀಲ, ಅಸಹ್ಯ ಪದಗಳನ್ನು ಬಳಸಿ ಹೋರಾಟಗಾರರನ್ನು ನಿಂದಿಸಿದ್ದು, ಸುದ್ದಿ ಬಿಡುಗಡೆಯ “ಕಲ್ಚರ್” ಹೊರ ಜಗತ್ತಿಗೂ ತಿಳಿಯುವಂತೆ ಮಾಡಿತ್ತು.
ಪ್ರಕರಣ ವಜಾಗೊಳಿಸುವಂತೆ ಹೈ ಕೋರ್ಟ್ ಮೆಟ್ಟಿಲೆರಿದ್ದರು:
ಹಲ್ಲೆ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಆರೋಪಿಗಳು ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.ಆದರೆ ರಾಜ್ಯ ಉಚ್ಚ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಮೊದಲೇ ಆರೋಪಿಗಳು ಅರ್ಜಿಯನ್ನು ವಾಪಸು ಪಡೆದುಕೊಂಡರು. ದೂರು ನೀಡುವಾಗ ಒದಗಿಸಲಾದ ಸಾಕ್ಷ್ಯಗಳು ಹಾಗೂ ಸಾಕ್ಷಿಗಳು ಪ್ರಭಲವೂ ಗುರುತರವಾದುದನ್ನು ಮನಗಂಡ ಆರೋಪಿಗಳು, ಪ್ರಕರಣ ವಜಾ ಆಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಮನಗಂಡು ದೂರನ್ನು ವಾಪಸು ಪಡೆದಿದ್ದರು ಎನ್ನಲಾಗಿದೆ. ಕೊನೆಗೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ 500 ದಿನಗಳ ಹೋರಾಟ ಗುರಿ ಕಾಣದೆ ನ್ಯಾಯಾಲಯಕ್ಕೆ ಶರಣಾದರು ಎನ್ನಲಾಗಿದೆ.
ಷರತ್ತು ಬದ್ದ ಜಾಮೀನು :
ಮೇಲಿನ ಪ್ರಕರಣಕ್ಕೆ ಸಂಭಂದಿಸಿದಂತೆ ನ್ಯಾಯಾಲಯಕ್ಕೆ ಶರಣಾದ ಸಿಬ್ಬಂದಿಗಳಿಗೆ ನ್ಯಾಯಾಲಯವೂ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಮೆಲುಕು : ಸುದ್ದಿ ಬಿಡುಗಡೆ ಎಂಬುದು ಪುತ್ತೂರಿನ ಲೋಕಲ್ ದಿನ ಪತ್ರಿಕೆ. ಯು.ಪಿ. ಶಿವಾನಂದ ಎಂಬುವರು ಇದರ ಸಂಪಾದಕರು.