ದೆಹಲಿ : ದಿ ವೈರ್ ಎಂಬ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ ವರದಿಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ 7 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಜಯ್ ಷಾ ಸಂಸ್ಥೆ ಅತ್ಯಲ್ಪ ಅವಧಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ ಎಂದು ದಿ ವೈರ್ ವೆಬ್ ಸೈಟ್ ನಲ್ಲಿ ವರದಿ ಪ್ರಕಟವಾಗಿತ್ತು. ವರದಿಯನ್ನು ಬರೆದಿದ್ದ ಪತ್ರಕರ್ತೆ, ಸುದ್ದಿ ವೆಬ್ ಸೈಟ್ ನ ಸಂಪಾದಕರು ಹಾಗೂ ವೆಬ್ ಸೈಟ್ ನ ಮಾಲಿಕರ ವಿರುದ್ಧ ಅಹಮದಾಬಾದ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಜಯ್ ಅವರ ಒಡೆತನದ ಟೆಂಪಲ್ ಎಂಟರ್ಪ್ರೈಸಸ್ ಲಿಮಿಟೆಡ್ 2013 ಮತ್ತು 2014ರಲ್ಲಿ ಕ್ರಮವಾಗಿ ₹ 6,230 ಮತ್ತು ₹ 1,724ರಷ್ಟು ನಷ್ಟ ಅನುಭವಿಸಿತ್ತು. ಆದರೆ 2014-15ನೇ ಸಾಲಿನಲ್ಲಿ ಕಂಪೆನಿ ₹ 18,728ರಷ್ಟು ಲಾಭ ಗಳಿಸಿತ್ತು. ಆದರೆ 2015-16ನೇ ಸಾಲಿನಲ್ಲಿ ಕಂಪೆನಿ ₹ 80 ಕೋಟಿ ಲಾಭ ಗಳಿಸಿದೆ’ ಎಂದು ‘ದಿ ವೈರ್’ ವರದಿ ಮಾಡಿತ್ತು.
ಈ ವರದಿಯನ್ನು ಅಲ್ಲಗೆಳೆದಿರುವ ಜಯ್ ಷಾ(ಅಮಿತ್ ಷಾ ಅವರ ಪುತ್ರ), ಸುದ್ದಿ ಜಾಲತಾಣದ ಸಿಬ್ಬಂದಿ ವಿರುದ್ಧ ₹ 100 ಕೋಟಿ ಮಾನನಷ್ಟ ಪರಿಹಾರ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಈ ಸಂಭಂದ ನ್ಯಾಯಾಲಯ ಅ.11 ಕ್ಕೆ ಅರ್ಜಿ ವಿಚಾರಣೆ ನಡೆಸಲಿದೆ. ಜಯ್ ಷಾ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ.