ಬಂಡೀಪುರ: ಅಬ್ಬರಿಸಿ ಬೊಬ್ಬಿರಿದ ಮಳೆಯಿಂದಾಗಿ ಬಂಡೀಪುರ ಹಸಿರು ಕಾನನಗಳಿಂದ ಕಂಗೊಳಿಸುತ್ತಿದ್ದರೆ, ಅದರೊಳಗೆ ವನ್ಯಪ್ರಾಣಿಗಳ ಚಿನ್ನಾಟ, ಪಕ್ಷಿಗಳ ಕಲರವ, ಹುಲಿ ಘರ್ಜನೆ, ಆನೆಗಳು ಘೀಳಿಡುವ ಸದ್ದು ರೋಮಾಂಚನಗೊಳಿಸುತ್ತಿದೆ.
ಅಲ್ಲದೆ ದಸರಾ ರಜೆಯಲ್ಲಿ ಬಂಡೀಪುರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಸಫಾರಿಗೆ ತೆರಳುವವರಿಗೆ ಹುಲಿ, ಚಿರತೆ, ಆನೆ, ಜಿಂಕೆ ಹೀಗೆ ಹಲವು ಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು ಮೈಪುಳಕಗೊಳಿಸುತ್ತಿವೆ.
ಮೊದಲೆಲ್ಲ ಹುಲಿಗಳು ಕಾಣುವುದೇ ಅಪರೂಪವಾಗಿತ್ತು. ಆದರೆ ಇದೀಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿ ಕಾಣಿಸುವುದು ಖುಷಿಯ ವಿಚಾರವಾಗಿದೆ. ಈ ನಡುವೆ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಒಂದೇ ಕಡೆ 4 ಹುಲಿಗಳು ನೀರು ಕುಡಿಯುತ್ತಿದ್ದ ದೃಶ್ಯ ಕಂಡು ಬಂದಿದ್ದು ಪ್ರವಾಸಿಗರು ಸಂತಸಗೊಂಡಿದ್ದಾರೆ.