Saturday, November 23, 2024
ಉಡುಪಿ

ಸಮಾಜದ ಶೋಷಿತರ ದನಿಯಾಗಿರುವ ತಹಶಿಲ್ದಾರ್ ಕಾರ್ಯಕ್ಕೆ ಊರವರ ಸಲಾಂ- ಕಹಳೆ ನ್ಯೂಸ್

ಉಡುಪಿ: ಹಲವು ವರ್ಷಗಳಿಂದ ಕರೆಂಟು, ನೀರು ಇಲ್ಲದೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪರಿಶಿಷ್ಟ ವರ್ಗದ ಕುಟುಂಬ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ತಾಲೂಕಿನ ತಹಶಿಲ್ದಾರ್ ಅವರ ಪ್ರಾಮಾಣಿಕ ಪ್ರಯತ್ನದಿಂದ ಇಂದು ಮನೆ ಬೆಳಕು ಕಾಣುವಂತಾಗಿದೆ.


ಈ ಮೊದಲು ಜನವರಿ 20 ರಂದು ತಹಶಿಲ್ದಾರ್ ಕಚೇರಿಯಲ್ಲಿ ನಡೆದ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ತಾಲೂಕಿನ ಸುಪ್ರೀತಾ ಬಂದು ಕಣ್ಣೀರಿಡುತ್ತಾ “ಹಲವು ವರ್ಷಗಳಿಂದ ಮನೆಯಲ್ಲಿ ಕರೆಂಟ್, ನೀರಿನ ವ್ಯವಸ್ಥೆಯಿಲ್ಲ. ದಯವಿಟ್ಟು ವಿದ್ಯುತ್ ಮತ್ತು ನೀರಿನ ಸೌಲಭ್ಯ ಒದಗಿಸಿಕೊಡಿ ಎಂದು ತಹಶಿಲ್ದಾರ್ ಪ್ರತಿಭಾ ಆರ್ ಮುಂದೆ ಅಳಲು ತೋಡಿಕೊಂಡಿದ್ದರು. ನೊಂದ ಹೆಣ್ಣುಮಗಳ ದುಃಖ ಕೇಳಿದ ತಹಶಿಲ್ದಾರ್ ತಕ್ಷಣವೇ ಈ ವಿಷಯದಲ್ಲಿ ಕಾರ್ಯಪ್ರವೃತ್ತರಾಗುವಂತೆ ಸಂಬoಧಪಟ್ಟ ಇಲಾಖೆಗಳಿಗೆ ಖಡಕ್ ಸೂಚನೆ ನೀಡಿದ್ದರು ಮತ್ತು ಸಭೆ ಮುಗಿಸಿದ ದಿನವೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಆ ಕೊರಗ ಕುಟುಂಬದ ಮನೆಗೆ ಭೇಟಿ ನೀಡಿ ಮನೆಯ ಪರಿಸ್ಥಿತಿಯನ್ನು ಅವಲೋಕಿಸಿದರು. ಮೂಲಭೂತ ಸೌಕರ್ಯಗಳೂ ಇಲ್ಲದ ಮನೆಯ ಪರಿಸ್ಥಿತಿಯನ್ನು ಕಂಡು ಮರುಗಿದ ತಹಶಿಲ್ದಾರ್ ಇದುವರೆಗೂ ಕರೆಂಟು-ನೀರು ನೀಡದ ಇಲಾಖೆಗಳನ್ನು ತರಾಟೆಗೆ ತೆಗೆದುಕೊಂಡರು. ಆದಾದ ಎರಡೇ ದಿನಕ್ಕೆ ಮನೆಯ ಮುಂದೆ ನಲ್ಲಿ ಹಾಕಿಸಿ ನೀರಿನ ವ್ಯವಸ್ಥೆ ಮಾಡಿಸಿಕೊಟ್ಟರು ಮತ್ತು ಮೂರೇ ದಿನಕ್ಕೆ ಮನೆಯ ಮುಂದೆ ಬೀದಿ ದೀಪ ಹಾಕಿಸಿಕೊಟ್ಟು ಮನೆಯೊಳಗೆ ವಿದ್ಯುತ್ ಒದಗಿಸಲಿದ್ದ ಕೆಲವೊಂದು ತೊಡಕುಗಳನ್ನು ನಿವಾರಿಸಿ ಮನೆಯೊಳಗೂ ಕರೆಂಟ್ ಮಾಡಿಸಿಕೊಟ್ಟರು ಮತ್ತು ಶೌಚಾಲಯವನ್ನೂ ರಿಪೇರಿ ಮಾಡಿ ಬಳಸಲು ಅನುವು ಮಾಡಿಕೊಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದು ಕಣ್ಣೀರಿಟ್ಟ ಸುಪ್ರೀತಾ ಮೊಗದಲ್ಲಿ ಇಂದು ನಗು ತುಂಬಿದೆ. ನೊಂದವರ ಕಷ್ಟಗಳಿಗೆ ಮಿಡಿದ ತಹಶೀಲ್ದಾರ್ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ ಸುಪ್ರೀತಾ ಮತ್ತು ಊರವರು ಮೆಸ್ಕಾಂ ರವರ ಸಹಕಾರವನ್ನು ನೆನಪಿಸಿಕೊಂಡರು. ಇನ್ನು ಮಾಧ್ಯಮದವರ ಜೊತೆ ಮಾತಾನಡಿದ ತಹಶಿಲ್ದಾರ್ ಪ್ರತಿಭಾ ಆರ್ ಗ್ರಾಮ ಆಡಳಿತಾಧಿಕಾರಿ ಜಗದೀಶ್ ಹಾಗೂ ಪಿಡಿಓ ಸತೀಶ್ ಮತ್ತು ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್ ರವರ ನಿರಂತರ ಪ್ರಯತ್ನದಿಂದಾಗಿ ಈ ಕಾರ್ಯ ಸಾಧ್ಯವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು