ಬೆಂಗಳೂರು, ಫೆ 25 : ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ (67) ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಅವರು ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೊನ್ನೆಯಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಕಾಂಗ್ರೆಸ್ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ರಾಜಾ ವೆಂಕಟಪ್ಪ, ಈವರೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ರಾಜಾ ವೆಂಕಟಪಟ್ಟ ನಾಯಕ ಅವರಿಗೆ ಕಿಡ್ನಿ ಸ್ಟೋನ್ ಆಗಿದ್ದು, ಆಪರೇಶನ್ ಸಹ ಮಾಡಲಾಗಿತ್ತು. ಕಳೆದ 15 ದಿನಗಳ ಹಿಂದೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಆದರೆ, ಇಂದು ದಿಢೀರನೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ರಾಜಾ ವೆಂಕಟಪ್ಪ ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, “ಸುರಪುರದ ಶಾಸಕರು, ಬಹುಕಾಲದ ನನ್ನ ರಾಜಕೀಯ ಒಡನಾಡಿ ರಾಜ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಅತೀವ ನೋವುಂಟುಮಾಡಿದೆ. ಮೂರು ದಿನದ ಹಿಂದೆಯಷ್ಟೇ ಅವರನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದ್ದೆ. ಜನಾನುರಾಗಿ ವ್ಯಕ್ತಿತ್ವದ ರಾಜಾ ವೆಂಕಟಪ್ಪ ನಾಯಕ ಅವರ ಅಗಲಿಕೆ ವೈಯಕ್ತಿಕವಾಗಿ ಮತ್ತು ರಾಜ್ಯ ರಾಜಕಾರಣಕ್ಕೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.