Saturday, April 5, 2025
ಕ್ರೀಡೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ರಾಷ್ಟ್ರಮಟ್ಟದಲ್ಲಿ ವಿಜೇತರಾದ ಬಾಲವಿಕಾಸದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್ 

ವಿಟ್ಲ : ಭಾರತ್ ಸ್ಕೌಟ್ಸ್ – ಗೈಡ್ಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ವಿಜೇತರಾದ ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್- ಗೈಡ್ಸ್ ಶಿಬಿರಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ವತಿಯಿಂದ ಅಭಿನಂದನಾ ಸಮಾರಂಭ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಹರಿಯಾಣದ ಗಡ್ಪುರಿಯಲ್ಲಿ ಫೆಬ್ರವರಿ 19 ರಿಂದ 23 ರವರೆಗೆ ಏಕ್ ಭಾರತ್ ಶ್ರೇಷ್ಠ ಭಾರತ್ ಥೀಮ್ ನಲ್ಲಿ ನಡೆದ ಭಾರತ್ ಸ್ಕೌಟ್ಸ್ – ಗೈಡ್ಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕ ರಾಜ್ಯವನ್ನು ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 18 ಸ್ಕೌಟ್ಸ್- ಗೈಡ್ಸ್ ಹಾಗೂ 2 ಶಿಕ್ಷಕರು ಪ್ರತಿನಿಧಿಸಿದ್ದರು.ಈ ತಂಡವು ಶಿಬಿರದಲ್ಲಿ ಆಯೋಜಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ವಿವಿಧ ಸ್ಥಾನವನ್ನು ಗಳಿಸಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜೇತ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸೂರಿಕುಮೇರು-ಮಾಣಿ ಮಾರ್ಗವಾಗಿ ಪೆರಾಜೆಯ ವಿದ್ಯಾನಗರದವರೆಗೆ ಮೆರವಣಿಗೆಯ‌ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಬಾಲವಿಕಾಸದ ಬ್ಯಾಂಡ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು,ಶಿಕ್ಷಕರು ಪೋಷಕರು,ಹಿತೈಷಿಗಳು ಭಾಗವಹಿಸಿದ್ದರು.ನಂತರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಭಾವಯಾನ- ಗೆಲುವಿನ ಪಯಣ “ಅಭಿನಂದನಾ ಕಾರ್ಯಕ್ರಮ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿಯ ಅಧ್ಯಕ್ಷರು ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಹ್ಲಾದ ಜೆ ಶೆಟ್ಟಿ ಇವರು ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ನಮ್ಮ ಶಾಲೆಯ ಸ್ಕೌಟ್- ಗೈಡ್ ವಿದ್ಯಾರ್ಥಿಗಳು ನಮ್ಮ ಶಾಲೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.ಶಾಲೆಯಲ್ಲಿ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಕೊಡುತ್ತಿದ್ದು, ಅಂತರಾಷ್ಟ್ರೀಯ ತರಬೇತುದಾರರಿಂದ ತರಬೇತಿಗೊಳಿಸುತ್ತಿದ್ದೇವೆ.ವಿದ್ಯಾರ್ಥಿಗಳು‌ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಯವರು ಮಾತನಾಡಿ ನಮ್ಮ ರಾಜ್ಯದ ಕಲೆಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶಿಸಿ ಬಹುಮಾನ ಪಡೆದದ್ದು ಹೆಮ್ಮೆಯ ವಿಷಯ ಎಂದು ಅಭಿನಂದಿಸಿ, ಬಾಲವಿಕಾಸ ಶಾಲೆಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಲಿ‌ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ವಾಳ ತಾಲೂಕಿನ ಶಿಕ್ಷಣ ಸಂಯೋಜಕಿ ಸುಧಾ ಪಿ ಯವರು ಮಾತನಾಡಿ, ಬಾಲವಿಕಾಸ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಮಾನ ಅವಕಾಶ, ಸವಲತ್ತುಗಳನ್ನು ಒದಗಿಸುತ್ತಾ ದೇಶದಲ್ಲಿಯೇ ಹೆಮ್ಮೆ ಪಡುವಂತಹ ಸಂಸ್ಥೆಯಾಗಿ ಹೊರಹೊಮ್ಮಿದೆ.ಎಲ್ಲಾ ಶಿಬಿರಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸಿದರು.

ಶಿಬಿರಾರ್ಥಿಗಳಾದ ಆಶ್ರಯ್ ಎಲ್,ನಿವ್ಯ ರೈ, ಹಾಗೂ ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿಯವರು ಶಿಬಿರದ ಅನುಭವಗಳನ್ನು ಹಂಚಿಕೊಂಡರು.ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ ಕಾರ್ಯಕ್ರಮದ ಕುರಿತು ಶುಭನುಡಿಗಳನ್ನಾಡಿದರು. ಶಿಬಿರಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗೌರವ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಜಾಗೃತಿ‌ ಮೂಡಿಸಿ, ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗದಿಂದ ಪ್ರಶಂಸೆಯನ್ನು ಪಡೆದ ನಾಲ್ಕನೇ ತರಗತಿಯ ಬುಲ್ ಬುಲ್ ವಿದ್ಯಾರ್ಥಿನಿ ಸನ್ನಿಧಿ ಎಲ್ ಎಸ್ ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ, ಸ್ಕೌಟ್ ಮಾಸ್ಟರ್ ಸಪ್ನ,ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು,ಶಾಲಾ ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿಯ ಉಪಾಧ್ಯಕ್ಷರಾದ ಬಾಲಕೃಷ್ಣ ಆಳ್ವ ಸ್ವಾಗತಿಸಿ, ಕಾರ್ಯದರ್ಶಿ ಉಮ್ಮರಗಿ ಶರಣಪ್ಪ ವಂದಿಸಿದರು.ಶಿಕ್ಷಕಿಯರಾದ ಯಶೋಧ ಹಾಗೂ ಯಮುನಾ ಕಾರ್ಯಕ್ರಮ ನಿರ್ವಹಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ