ಉಜಿರೆ: ವ್ಯಕ್ತಿಯ ಸುಖ-ಭೋಗ, ವೈಭವ, ಆಡಂಬರ ನೋಡಿ ಗೌರವಿಸುವುದಲ್ಲ. ಆತನ ಅಂತರAಗದ ಸೌಂದರ್ಯ ಅಂದರೆ ಅರಿಷಡ್ವರ್ಗಳನ್ನು ಗೆದ್ದರೆ, ಅಹಂ, ಮೋಹ, ರಾಗ-ದ್ವೇಷಗಳನ್ನು ತ್ಯಜಿಸಿದರೆ ಆತನನ್ನು ಗೌರವಿಸಬೇಕು. ಆದರೆ, ಕಾಲದೋಷದಿಂದ ನಾವು ಬಹಿರಂಗ ಸೌಂದರ್ಯವನ್ನು ಮಾತ್ರ ಗಮನಿಸುತ್ತೇವೆ. ಅಂತರAಗ ಸೌಂದರ್ಯ ಗುರುತಿಸುವುದಿಲ್ಲ ಎಂದು ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಸೋಮವಾರ ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.
ಮಹಾಮಸ್ತಕಾಭಿಷೇಕದಿಂದ ಮಾನಸಿಕ ಪರಿವರ್ತನೆಯೊಂದಿಗೆ ಸಾಮಾಜಿಕ ಸುಧಾರಣೆಯಾಗಬೇಕು. ಜ್ಞಾನವೇ ಶಕ್ತಿಯಾಗಿದ್ದು ಇಂದು ಜ್ಞಾನದ ಪ್ರಕಾಶ ಕಡಿಮೆಯಾಗುತ್ತಿದೆ. ಎಲ್ಲಾ ಮಾನಸಿಕ ಕಷಾಯಗಳನ್ನು ತ್ಯಜಿಸಿ ಜಿತೇಂದ್ರಿಯರಾದರೆ ಮಾತ್ರ ಎಲ್ಲರೂ ಜಿನೇಂದ್ರರಾಗಲು ಸಾಧ್ಯ ಜೊತೆಗೆ ಭಕ್ತಿ ಇದ್ದರೆ ಮಾತ್ರ ಅಲ್ಲಿ ಮುಕ್ತಿ ಸಾಧ್ಯ ಎಂದು ಮುನಿಗಳು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಜೈನರು ಕನ್ನಡ ನಾಡು-ನುಡಿ- ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಜೈನ ಸಾಹಿತ್ಯ ಇಲ್ಲದಿದ್ದರೆ ಕನ್ನಡ ಸಾಹಿತ್ಯವೆ ಇಲ್ಲ. ಅನೇಕ ಶ್ರೇಷ್ಠ ಕೃತಿಗಳನ್ನು ಜೈನ ಕವಿಗಳು, ವಿದ್ವಾಂಸರು ಮತ್ತು ಸಾಹಿತಿಗಳು ರಚಿಸಿದ್ದಾರೆ. ಜೈನರ ಶ್ರೇಷ್ಠ ತತ್ವವಾದ ಅಹಿಂಸೆಯಿAದ ವಿಶ್ವಶಾಂತಿ ಸಾಧ್ಯ. ಮೈಸೂರು ಅರಮನೆ ಮತ್ತು ಅರಸರಿಗೆ ಜೈನರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಧನ್ಯತೆಯಿಂದ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯ ಅಂಚೆ ಮಹಾಪ್ರಬಂಧಕ ಶಿರ್ತಾಡಿ ರಾಜೇಂದ್ರ ಕುಮಾರ್, ಅಂಚೆ ಇಲಾಖೆ ಮೂಲಕ ರೂಪಿಸಿದ ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆಕಾರ್ಡನ್ನು ಮೈಸೂರು ಮಹಾರಾಜರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಮಖಂಡಿಯ ಹಿರಿಯ ಸಾಹಿತಿ ಬಿ.ಪಿ.ನ್ಯಾಮಗೌಡ ಜೈನ ಅರಸುಮನೆತನಗಳ ಕೊಡುಗೆ ಬಗ್ಗೆ ವೀಶೇಷ ಉಪನ್ಯಾಸ ನೀಡಿದರು. ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ| ಪದ್ಮಪ್ರಸಾದ ಅಜಿಲ, ಪ್ರವೀಣಕುಮಾರ್ ಇಂದ್ರ, ಜಯರಾಜ ಕಂಬಳಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಹುಬ್ಬಳ್ಳಿಯ ಮಹಾವಿರ ಕುಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು