ಸಜೀಪಮೂಡ ವಲಯ ಕಾಂಗ್ರೆಸ್ ಉಪಾಧ್ಯಕ್ಷ ಶೈಲೇಶ್ ಪೂಜಾರಿಯಿಂದ ಸೇವಾ ಕಾರ್ಯ: ಆಶ್ರಯ ಕುಟೀರ ಹಸ್ತಾಂತರ – ಕಹಳೆ ನ್ಯೂಸ್
ಬಂಟ್ವಾಳ: ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಮಳೆ, ಬಿಸಿಲಿಗೆ ಪರಿತಪಿಸುತ್ತಿದ್ದ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ನಿವಾಸಿಗಳಾದ ಭಾಗಿ ಮತ್ತು ಕಮಲ ಎಂಬವರಿಗೆ ಸ್ಥಳೀಯ ಯುವ ಎಂಜಿನಿಯರ್, ಸಜೀಪಮೂಡ ವಲಯ ಕಾಂಗ್ರೆಸ್ ಉಪಾಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆಯವರು ಮನೆ ನಿರ್ಮಿಸಿ ಕೊಟ್ಟಿದ್ದು ಗುರುವಾರ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಹೋಮ ನಡೆಯಿತು. ಬಳಿಕ ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ ಮನೆಮಂದಿಗೆ ಕೀಲಿಕೈ ಹಸ್ತಾಂತರಿಸಿ ಮಾತಾನಾಡಿದ ಅವರು ಬಡವರಿಗೆ ಮನೆ ನಿರ್ಮಾಣ ಮಾಡಿರುವುದು ಇದು ದೇವರು ಮೆಚ್ಚುವ ಕಾರ್ಯವಾಗಿದ್ದು ಮನೆಮಂದಿಯ ಸಹಕಾರ ಹಾಗೂ ಪ್ರೋತ್ಸಾಹದಿಂದ ಶೈಲೇಶ್ ಪೂಜಾರಿ ಈ ಕೆಲಸ ಮಾಡಿದ್ದಾರೆ, ಇಂತಹ ಸೇವಾ ಕಾರ್ಯ ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು ಎನ್ನುವ ಉದ್ದೇಶದಿಂದ ಸಣ್ಣ ಸಮಾರಂಭ ನಡೆಸಿ ಮನೆ ಹಸ್ತಾಂತರ ಕೆಲಸ ಮಾಡಲಾಗಿದೆ. ಇನ್ನಷ್ಟು ಮಂದಿ ಸ್ಪೂರ್ತಿ ಪಡೆದು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಹಲವು ವರ್ಷಗಳಿಂದ ಟರ್ಪಾಲು ಹಾಕಿದ ಮನೆಯಲ್ಲಿ ಈ ಕುಟುಂಬ ಜೀವನ ನಿರ್ವಹಣೆ ಮಾಡುತ್ತಿದ್ದು ಶೈಲೇಶ್ ಪೂಜಾರಿಯವರು ಸ್ಪಂದಿಸಿ ಮಾನವೀಯ ನೆಲೆಯಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಇದು ಅವರಿಗೆ ದೇವರು ನೀಡಿದ ಯೋಗ ಎಂದು ತಿಳಿಸಿದರು.
ತಾಲೂಕು ಪಂಚಾಯತಿ ಮಾಜಿ ಸದಸ್ಯ ಕೆ. ಸಂಜೀವ ಪೂಜಾರಿ ಸಜೀಪಮೂಡ ಗ್ರಾ.ಪಂ. ಅಧ್ಯಕ್ಷೆ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲ್ಲಿ ಮನೆ ನಿರ್ಮಾಣದ ರುವಾರಿ ಶೈಲೇಶ್ ಪೂಜಾರಿ ಅವರನ್ನು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಸಜೀಪಮೂಡ ವಲಯ ಕಾಂಗ್ರೆಸ್ ವತಿಯಿಂದ ಗೌರವಿಸಲಾಯಿತು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಕೆ. ಸಂಜೀವ ಪೂಜಾರಿ, ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಕುಚ್ಚಿಗುಡ್ಡೆ, ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕ ಬಿ.ಕೆ. ಸೇಸಪ್ಪ ಬೆದ್ರಕಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೈಲೇಶ್ ಪೂಜಾರಿ ಸ್ವಾಗತಿಸಿ, ಸಜೀಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಕರೀಂ ಬೊಳ್ಳಾಯಿ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.