ಉಜಿರೆ: ಜೈನರು ಅಲ್ಪಸಂಖ್ಯಾತರಾದರೂ ಸಮಾಜದ ಮೇಲೆ ಜೈನರ ಜೀವನ ಶೈಲಿ, ದಿಗಂಬರ ಮುನಿಗಳ ಆಚಾರ-ವಿಚಾರ, ಆಹಾರ-ವಿಹಾರ ಮತ್ತು ಉಪದೇಶಾಮ್ರತ ಸಮಾಜದ ಮೇಲೆ ಗಾಢ ಪರಿಣಾಮ ಬೀರುತ್ತದೆ.ಧರ್ಮಪ್ರಭಾವನೆಯೊಂದಿಗೆ ಆರೋಗ್ಯಪೂರ್ಣ ಜೀವನಕ್ಕೆ ನಿರಂತರ ಪ್ರೇರಣೆ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತದಲ್ಲಿ ಜೈನರ ಜೀವನಶೈಲಿ, ವ್ರತ-ನಿಯಮಗಳು, ನಾಯಕತ್ವ ಗುಣ, ಪರೋಪಕಾರ ಸೇವಾಕಳಕಳಿ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ.ದಿಗಂಬರ ಮುನಿಗಳ ವಿಹಾರ ಮತ್ತು ಉಪದೇಶದಿಂದ ಧರ್ಮಜಾಗ್ರತಿ ಮತ್ತು ಧರ್ಮ ಪ್ರಭಾವನೆಯೊಂದಿಗೆ ಆದರ್ಶ ಸಮಾಜ ರೂಪುಗೊಳ್ಳುತ್ತದೆ.
ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ಅತ್ಯಂತ ವೈಭವದಿಂದ ಮತ್ತು ವ್ಯವಸ್ಥಿತವಾಗಿ ನಡೆದ ಬಗ್ಗೆ ಸಚಿವರು ಮುಕ್ತಪ್ರಶಂಸೆ ವ್ಯಕ್ತಪಡಿಸಿದರು.
ಪೂಜ್ಯ ಅಮೋಘ್ ಕೀರ್ತಿ ಮುನಿಮಹಾರಾಜರು ಮಂಗಲಪ್ರವಚನ ನೀಡಿ ಮಸ್ತಕಾಭಿಷೇಕದಿಂದ ಎಲ್ಲರಲ್ಲೂ ಅರಿಷಡ್ವರ್ಗಗಳು ದೂರವಾಗಿ ಮನಸು ಪವಿತ್ರವಾಗಿದೆ.ನವಚೈತನ್ಯ ಮೂಡಿ ಬಂದಿದೆ. ಮುಖದಲ್ಲಿ ಮಂದಹಾಸವಿದೆ. ಇದನ್ನು ನೋಡಿ ಬಾಹುಬಲಿ ಸ್ವಾಮಿ ಕೂಡಾ ಮಂದಸ್ಮಿತರಾಗಿ ಸಂತಸ ಪಡುತಿದ್ದಾರೆ ಎಂದು ಹೇಳಿದರು. ಧರ್ಮದ ಮರ್ಮ ಅರಿತು ,ಪಾಲಿಸಿ, ಸತ್ಸಂಗದಲ್ಲಿದ್ದು ಜೀವನ ಪಾವನ ಮಾಡಬೇಕು.ಮೋಕ್ಶ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ಮಸ್ತಕಾಭಿಷೇಕಕ್ಕೆ ಹಿಟ್ಟು ಕೊಟ್ಟವರು,ಹುಟ್ಟುಕೊಟ್ಟವರು, ಉಪ್ಪು ಕೊಟ್ಟವರು ಎಲ್ಲರೂ ಅಮೂಲ್ಯ ಕೊಡುಗೆ ನೀಡಿರುವಿರಿ.ವೇಣೂರು ಮಸ್ತಕಾಭಿಷೇಕವು ಐತಿಹಾಸಿಕ ದಾಖಲೆಯಾಗಿ ಸದಾ ಎಲ್ಲರ ಸ್ಮರಣೆಯಲ್ಲಿರುತ್ತದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ದೇಶದ ಬೆನ್ನೆಲುಬು. ಆದರ್ಶ ಸಮಾಜ ಸುಧಾರಕ ಎಂದು ಶ್ಲಾಘಿಸಿ ಆಶೀರ್ವದಿಸಿದರು.
ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿ ಜೈನ ಧರ್ಮದ ಪ್ರಕಾರ ಪರಿಶುದ್ಧ ಭಕ್ತಿಯಿಂದ ಮುಕ್ತಿ ಪ್ರಾಪ್ತಿಯಾಗುತ್ತದೆ.ಬಾಹುಬಲಿಯ ಜೀವನ ಮತ್ತು ಸಂದೇಶ ಆದರ್ಶ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.
ಮೂಡಬಿದ್ರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮಾತನಾಡಿ, ದಾನಕ್ಕೆ ಧರ್ಮಸ್ಥಳ , ದಯೆಗೆ ಮುನಿಗಳು ಹಾಗೂ ಧರ್ಮಕ್ಕೆ ಶಾಸ್ತ್ರ ಪ್ರೇರಕ ಹಾಗೂ ಮಾರ್ಗದರ್ಶಿಯಾಗಿದೆ ಎಂದರು.
ಅಧ್ಯಕ್ಶತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಎಲ್ಲರೂ ಭಾವನೆಯಿಂದ ಬಾಹುಬಲಿ ಆಗಬೇಕು. ಮಸ್ತಕಾಭಿಷೇಕದ ಸವಿ ನೆನಪನ್ನು ಸದಾ ಸ್ಮರಿಸಿಕೊಂಡು ಸಾರ್ಥಕ ಹಾಗೂ ಪವಿತ್ರ ಜೀವನ ನಡೆಸಬೇಕು.ಜೈನರ ಆದರ್ಶ ಜೀವನಶೈಲಿ ಮತ್ತು ನಾಯಕತ್ವ ಗುಣದಿಂದಾಗಿ ಸಮಾಜದಲ್ಲಿ ಅವರಿಗೆ ವಿಶೇಷ ಗೌರವ ಇದೆ ಎಂದರು.