ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದೆ. ನವೆಂಬರ್ 1 ರ ಕನ್ನಡಿಗರ ಉತ್ಸವ ಆಚರಣೆಗೂ ಮುನ್ನವೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ.
ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಜಾರಿಯಾಗಬೇಕೆಂದು ಬಹು ಕಾಲದಿಂದ ಬೇಡಿಕೆ ಕೇಳಿ ಬರುತ್ತಿದ್ದರೂ ಕೆಲ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸರ್ಕಾರದ ಕಡತಗಳು ಇಂಗ್ಲೀಷಿನಲ್ಲಿ ಇರುತ್ತಿದ್ದವು.
ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ನವೆಂಬರ್ 1 ರಿಂದ ಎಲ್ಲ ಇಲಾಖೆಗಳ ಕಡತಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ ಕಡತಗಳು ಕನ್ನಡದಲ್ಲಿರದಿದ್ದರೆ ಸಹಿಯೇ ಮಾಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.