ಕಡಬ : ವಿದ್ಯಾರ್ಥಿನಿಯರಿಗೆ ಆ್ಯಸಿಡ್ ದಾಳಿ ಪ್ರಕರಣ – ಕಡಬ ಜಂಕ್ಷನ್ನಲ್ಲಿ ಎ.ಬಿ.ವಿ.ಪಿ.ಯಿಂದ ಪ್ರತಿಭಟನೆ – ಕಹಳೆ ನ್ಯೂಸ್
ಕಡಬ: ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಕೇರಳದ ಯುವಕನೋರ್ವ ಆ್ಯಸಿಡ್ ಎರಚಿದ ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸುಬ್ರಹ್ಮಣ್ಯ ಇದರ ಕಡಬ ಶಾಖೆಯ ವತಿಯಿಂದ ಕಡಬ ಮುಖ್ಯ ರಸ್ತೆಯ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಎಬಿವಿಪಿಯ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಶ್ರೀರಾಂ ಅಂಗಿರಸ ಅವರು ಮಾತನಾಡಿ, ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಎಸಗಿರುವುದನ್ನು ತೀವ್ರವಾಗಿ ಎ.ಬಿ.ವಿ.ಪಿ. ಖಂಡಿಸುತ್ತದೆ. ಈ ಘಟನೆ ವಿಕೃತ ಮನಸ್ಥಿತಿಯ ಘಟನೆಯಾಗಿದ್ದು ಇದು ಆರೋಗ್ಯಕರ ಸಮಾಜಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ, ತನ್ನ ವಿಕೃತ ಮನಸ್ಥಿತಿಯಿಂದ ಈ ಘಟನೆಯನ್ನು ನಡೆಸಿರುವ ಆರೋಪಿಗೆ ಹಾಗೂ ಸಹಕರಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ಕರ್ಯಕರ್ತೆ ಪುಣ್ಯ, ಎ.ಬಿ.ವಿ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಹೇಮಂತ್ ಸುಬ್ರಹ್ಮಣ್ಯ ಸ್ವಾಗತಿಸಿ, ಸ್ಟೂಡೆಂಟ್ ಡೆವಲಪ್ಮೆಂಟ್ ಪ್ರಮುಖ್ ಚೈತ್ರಾ ವಂದಿಸಿದರು. ಪ್ರತಿಭಟನೆಯ ಬಳಿಕ ಕಡಬ ತಾಲೂಕು ಕಛೇರಿಗೆ ಮೆರವಣಿಗೆಯಲ್ಲಿ ಕಾರ್ಯಕರ್ತರು ತೆರಳಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು, ಉಪ ತಹಶೀಲ್ದಾರ್ ಮನೋಹರ್ ಕೆ.ಟಿ. ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ಎ.ಬಿ.ವಿ.ಪಿ. ತಾಲೂಕು ಸಂಚಾಲಕ ಸುಹಾಸ್ ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.