ಮೂಡುಬಿದಿರೆ ಪಂಚ ಗ್ಯಾರಂಟಿ ಫಲಾನುಭವಿಗಳ ಸಮಾವೇಶ : “ಗ್ಯಾರಂಟಿಗಳಿಂದ ಸಾಮಾಜಿಕ ಕ್ರಾಂತಿ” – ದಿನೇಶ್ ಗುಂಡೂರಾವ್ – ಕಹಳೆ ನ್ಯೂಸ್
ಮೂಡುಬಿದಿರೆ : ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಿಂದ ಮಹಿಳೆಯರು ಸಬಲರಾಗುತ್ತಿದ್ದು ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಈ ಗ್ಯಾರಂಟಿಗಳು ಸಾಮಾಜಿಕ ಕ್ರಾಂತಿಗೆ ಕಾರಣವಾಗುತ್ತಿದ್ದು, ಪ್ರಗತಿಪರ ರಾಜ್ಯವಾಗಿ ಮುನ್ನುಗ್ಗುತ್ತಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸ್ವರಾಜ್ಯ ಮೈದಾನದಲ್ಲಿ ನಡೆದ ಮೂಡುಬಿದಿರೆ ತಾಲೂಕು ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಸಿವು ಮುಕ್ತ ಕರ್ನಾಟಕಕ್ಕೆ ಒತ್ತು ನೀಡಿದ್ದೇವೆ. ಈಗ ಬಡತನ ಮುಕ್ತ ರಾಜ್ಯವನ್ನಾಗಿಸಲು ಗ್ಯಾರಂಟಿ ಯೋಜನೆಗಳ ಮೂಲಕ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಸರಕಾರ ದಿವಾಳಿಯಾಗಿದೆ. ಲೋಕಸಭೆ ಚುನಾವಣೆಯ ಬಳಿಕ ಗ್ಯಾರಂಟಿ ರದ್ದಾಗುತ್ತದೆ ಎಂಬ ವಿಪಕ್ಷಗಳ ಸುಳ್ಳು ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಈ ಸರಕಾರವಿರುವವರೆಗೂ ಗ್ಯಾರಂಟಿ ಜಾರಿಯಲ್ಲಿರುತ್ತದೆ ಎಂದು ಅವರು ಭರವಸೆ ನೀಡಿದರು. ರಾಜ್ಯ ಸರಕಾರವು ಅವಿಭಜಿತ ದ.ಕ. ಜಿಲ್ಲೆಯ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಬೆಂಗಳೂರು – ಮಂಗಳೂರು ಆರ್ಥಿಕ ಕಾರಿಡಾರ್ ನಿರ್ಮಿಸುವ ಯೋಜನೆ, ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಮೂಲಕ ಈ ಭಾಗದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು. ಗೃಹಲಕ್ಷ್ಮೀ ಫಲಾನುಭವಿ ಬೇಬಿ ಬಂಗಬೆಟ್ಟು, ಗೃಹಜ್ಯೋತಿಯ ಇಂದಿರಾ ಬೆಳುವಾಯಿ, ಯುವ ನಿಧಿಯ ಸೌಮ್ಯ ಪುತ್ತಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಕೆ. ಸಹಾಯಕ ಆಯುಕ್ತ ಹರ್ಷವರ್ಧನ, ಕಾರ್ಯಕ್ರಮದ ನೋಡಲ್ ಅಧಿಕಾರಿ ಗೋಕುಲ್‌ದಾಸ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ಸ್ವಾಗತಿಸಿದರು. ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ವಂದಿಸಿದರು. ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು.