5, 8 ಮತ್ತು 9ನೇ ತರಗತಿಯ 2023-24ನೇ ಸಾಲಿನಲ್ಲಿ ಪರೀಕ್ಷೆಗಳು ಮುಂದೂಡಿಕೆ : ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ – ಕಹಳೆ ನ್ಯೂಸ್
ಬೆಂಗಳೂರು: 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿದ್ದು, ಈ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ರದ್ದುಪಡಿಸಿ ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಈಗಾಗಲೇ ಪರೀಕ್ಷೆಗಳು ಆರಂಭಗೊಂಡಿದ್ದವು. ಇದರ ನಡುವೆ ಇದೀಗ ವಿಭಾಗೀಯ ಪೀಠವು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಘನ ಸರ್ವೋಚ್ಛ ನ್ಯಾಯಾಲಯವು ರದ್ದುಪಡಿಸಿರುತ್ತದೆ.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನಿಂದಾಗಿ ಪ್ರಸ್ತುತ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಾಂಕ: 13.03.2024 ರಿಂದ 14.03.2024 ರವರೆಗೆ ಹಾಗೂ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ:13.03.2024 ರಿಂದ 16.03.2024 ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿ ಶಾಲಾ ಶಿಕ್ಷಣ ಇಲಾಖೆಯು ಆದೇಶವನ್ನು ಹೊರಡಿಸಿದೆ.
ಇಲಾಖೆಯ ಮುಂದಿನ ಆದೇಶದವರೆಗೆ ಈಗಾಗಲೇ ಕ್ಷೇತ್ರಶಿಕ್ಷಣಾಧಿಕಾರಿಗಳ ಹಂತಕ್ಕೆ ಸರಬರಾಜಾಗಿರುವ ಪ್ರಶ್ನೆಪತ್ರಿಕೆಗಳನ್ನು ತಮ್ಮ ಹಂತದಲ್ಲಿ ಸಂರಕ್ಷಿಸಿ ಸುರಕ್ಷಿತವಾಗಿಡಲು ಎಲ್ಲಾ ಬ್ಲಾಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಸೂಕ್ತ ಕ್ರಮವಹಿಸುವಂತೆಯೂ ಸೂಚಿಸಲಾಗಿದೆ.
ಈ ಎಲ್ಲಾ ಗೊಂದಲಗಳಿಂದಾಗಿ ಪರೀಕ್ಷೆಗಾಗಿ ತಯಾರಾಗಿದ್ದ ವಿದ್ಯಾರ್ಥಿಗಳ ಪಾಡು ಅತಂತ್ರವಾಗಿದೆ. ಪೆÇೀಷಕರ ಚಿತ್ತವು ಇಲಾಖೆಯ ಮುಂದಿನ ಕ್ರಮದತ್ತ ನೆಟ್ಟಿದೆ.