ಶಿರಾಡಿ ಘಾಟಿಯಲ್ಲಿ ರಸ್ತೆಗುರುಳಿದ ಗ್ಯಾಸ್ ತುಂಬಿದ ಟ್ಯಾಂಕರ್ : ಸಂಚಾರ ಅಸ್ತವ್ಯಸ್ತ –ಕಹಳೆ ನ್ಯೂಸ್
ಸಕಲೇಶಪುರ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ಬಳಿ ಗ್ಯಾಸ್ ತುಂಬಿದ ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಅದರಿಂದ ಗ್ಯಾಸ್ ಸೋರಿಕೆಯಾಗುತ್ತಿದೆ. ಬುಧವಾರ ಬೆಳಿಗ್ಗೆ ನೆದ ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಸುಪಾಸಿನ ಪರಿಸರದಲ್ಲಿ ಆತಂಕ ಮಡುಗಟ್ಟಿದೆ. ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.
ಹೆದ್ದಾರಿಯ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ ಎನ್ನುವುದು ಸ್ಥಳೀಯರು ನೀಡಿದ ಮಾಹಿತಿ . ಟ್ಯಾಂಕರ್ ಧರೆಗೆ ಉರುಳುತ್ತಲೇ ಅದರಿಂದ ಅಪಾಯಕಾರಿ ಗ್ಯಾಸ್ ಸೋರಿಕೆಯಾಗಿದೆ. ಹೀಗಾಗಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬೆಂಕಿ ಉರಿಸದಂತೆ ಹಾಗೂ ಬೆಂಕಿ ಕಡ್ಡಿ ಗೀರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇನ್ನು ಇತ್ತ ಟ್ಯಾಂಕರ್ ಉರುಳಿ ಬಿದ್ದಿರುವುದರಿಂದ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ. ಇಗಾಗಿ ಘಾಟ್ ನಲ್ಲಿ ಕಿಮೀ ಗಟ್ಟಲೇ ವಾಹನಗಳು ರಸ್ತೆಯ ಎರಡು ಕಡೆಯೂ ನಿಂತಿದೆ.
ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ಧಾವಿಸಿದ್ದು, ಸೂಕ್ತ ಬಂದೋ ಬಸ್ತು, ಸಂಚಾರ ನಿಯಂತ್ರಣ ಹಾಗು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಮಂಗಳೂರಿನ ಎಮ್. ಆರ್. ಪಿ. ಎಲ್ ನಿಂದ ತಜ್ಞರ ತಂಡ ಆಗಮಿಸಬೇಕಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬದಲಿ ಮಾರ್ಗ
ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ. ಪಲ್ಟಿಯಾದ ಗ್ಯಾಸ್ ಟ್ಯಾಂಕರ್ನಿಂದ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ. ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ.