NMC ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ವತಿಯಿಂದ ವಿಶ್ವ ಜಲ ದಿನಾಚರಣೆ ‘ನೀರರಿವು’ ಕಾರ್ಯಕ್ರಮ ; ಜೀವಜಲದ ಕುರಿತು ಮುಖ ವರ್ಣಚಿತ್ರ ರಚನೆ ಮತ್ತು ಕಿರು ನಾಟಕ ಸ್ಪರ್ಧೆ – ಕಹಳೆ ನ್ಯೂಸ್
ಸುಳ್ಯ, : ನೆಹರೂ ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ಘಟಕಗಳ ವತಿಯಿಂದ ವಿಶ್ವ ಜಲ ದಿನ ಪ್ರಯುಕ್ತ ‘ನೀರರಿವು’ ಎಂಬ ಮಹತ್ವದ ಕಾರ್ಯಕ್ರಮ ಮಾರ್ಚ್ 22 ಶುಕ್ರವಾರದಂದು ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ ಬಾಲಚಂದ್ರ ಗೌಡರು ನೇಚರ್ ಕ್ಲಬ್ ಕಾರ್ಯದರ್ಶಿ ಕು. ಪವಿತ್ರಾಕ್ಷಿ ಸಾಂಪ್ರದಾಯಿಕವಾಗಿ ನೀರು ನೀಡಿ ಅತಿಥಿಗಳನ್ನು ಸ್ವಾಗತಿಸುವ ರೀತಿಯಲ್ಲಿ ನೀಡಿದ ನೀರನ್ನು ಸ್ವೀಕರಿಸುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿ, ನಮ್ಮ ದೈನಂದಿನ ಬದುಕಿನಲ್ಲಿ ನೀರಿನ ಮಹತ್ವವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಉಜಿರೆಯ ಸಹಾಯಕ ಪ್ರಾಧ್ಯಾಪಕರು ಮತ್ತು ಸಸ್ಯಶಾಸ್ತ್ರಜ್ಞರಾದ ಪ್ರೊ. ಗಣೇಶ್ ವಿ ಶೆಂಡ್ಯೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ “ನಮಗೆ ಅರಿವಿಲ್ಲದಂತೆ ನಾವು ದಿನನಿತ್ಯ ಪೋಲು ಮಾಡುತ್ತಿರುವ ನೀರಿನ ಬಳಕೆಯನ್ನು ಅರಿತುಕೊಂಡು ಪ್ರತಿಬಾರಿಯೂ ನೀರನ್ನು ಸಾಧ್ಯವಾದಷ್ಟೂ ಮಿತವಾಗಿ ಬಳಸಿದ್ದಲ್ಲಿ ಮುಂದೆ ನೀರಿನ ಅಭಾವದಿಂದ ಪಾರಾಗಬಹುದು. ಜೀವ ಜಲವನ್ನು ಮಿತವಾಗಿ ಬಳಸಿ ಉಳಿಸುವ ಯೋಜನೆ ಸದಾ ನಮ್ಮ ಮನಸ್ಸಿನಲ್ಲಿ ಜಾಗೃತವಾಗಿ ಇರಬೇಕು. ಸ್ವಯಂಪ್ರೇರಿತ ನೀರರಿವು ಬಂದಾಗ ಜಲಸಂರಕ್ಷಣೆ ಸಾಧ್ಯ” ಎಂದರು.
ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಾಂಶನೆಗೈದರು. ವೇದಿಕೆಯಲ್ಲಿ ಐ.ಕ್ಯೂ.ಎ.ಸಿ ಸಂಯೋಜಕಿ ಡಾ.ಮಮತಾ ಕೆ ಉಪಸ್ಥಿತರಿದ್ದರು.
ಪ್ರಥಮ ಜೀವವಿಜ್ಞಾನ ಪದವಿ ವಿಭಾಗದ ಕು. ಅಕ್ಷತಾ ಮತ್ತು ಕು. ಮನಸ್ವಿನಿ ಪ್ರಾರ್ಥಿಸಿ, ಕು. ಶಿಲ್ಪಾ ಸ್ವಾಗತಿಸಿದರು. ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೇಚರ್ ಕ್ಲಬ್ ಸದಸ್ಯೆ ಕು. ಅಶ್ವಿನಿ ಅತಿಥಿಗಳನ್ನು ಪರಿಚಯಿಸಿ, ಕು. ಚೈತ್ರ ವಂದಿಸಿದರು. ಅಂತಿಮ ಜೀವವಿಜ್ಞಾನ ಪದವಿ ವಿದ್ಯಾರ್ಥಿನಿ ಕು. ಕೀರ್ತಿಕಾ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಜಲ ದಿನ ಪ್ರಯಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವಜಲದ ಕುರಿತು ಮುಖ ವರ್ಣ ಚಿತ್ರ, ಪೆನ್ಸಿಲ್ ಸ್ಕೆಚ್ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಕೃಪಾ ಎ ಎನ್, ಉಪನ್ಯಾಸಕಿ ಶೋಭಾ ಎ, ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಭವ್ಯ ಪಿ ಎಂ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥೆ ಉಷಾ ಎಂ ಪಿ, ಉಪನ್ಯಾಸಕರಾದ ಅಶ್ವಿನಿ ಕೆ, ಕೃತಿಕಾ ಕೆ ಜೆ, ದೀಕ್ಷಾ, ಅಜಿತ್ ಕುಮಾರ್, ಹರ್ಷ ಕಿರಣ, ಹರ್ಷಿತಾ ಉಪಸ್ಥಿತರಿದ್ದು ನೇಚರ್ ಕ್ಲಬ್ ಸದಸ್ಯರು ಮತ್ತು ಉಪನ್ಯಾಸಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.