SSLC Exam: ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ ಆರಂಭ..! 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ನೋಂದಣಿ – ಕಹಳೆ ನ್ಯೂಸ್
ಬೆಂಗಳೂರು: ವಿದ್ಯಾರ್ಥಿಗಳ ಪಾಲಿನ ಪ್ರಮುಖ ಘಟ್ಟಗಳಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯೂ ಒಂದು. ವಿದ್ಯಾರ್ಥಿ ಸಮೂಹಕ್ಕೆ ಮಾತ್ರವಲ್ಲ ಅವರ ಪೋಷಕರು ಹಾಗೂ ಶಿಕ್ಷಕರಿಗೂ ಇದು ಅಗ್ನಿಪರೀಕ್ಷೆಯೇ ಹೌದು. ಇಂದಿನಿಂದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ಆರಂಭವಾಗಲಿದ್ದು, ಶಾಲಾ ಶಿಕ್ಷಣ ಇಲಾಖೆ ಸಹ ಸಜ್ಜಾಗಿದೆ.
ಇದರ ಮಧ್ಯೆ ಖಾಸಗಿ ಶಾಲೆಗಳಿಂದ ಮತ್ತೊಂದು ಖ್ಯಾತೆ ಶುರುವಾಗಿದೆ. ಈ ಕುರಿತ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ರಾಜ್ಯದಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾದ ಬೆನ್ನಲ್ಲೇ ವಿದ್ಯಾರ್ಥಿಗಳ ಮತ್ತೊಂದು ಪ್ರಮುಖ ಘಟ್ಟ ಅಂತಲೇ ಬಿಂಬಿತವಾಗಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಇಂದಿನಿಂದ ಆರಂಭವಾಗಲಿದೆ. ಇನ್ನು ಈ ಕುರಿತಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಹ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಯಾವುದೇ ಲೋಪದೋಷಗಳಾಗದಂತೆ ಮುನ್ನೆಚ್ಚರಿಕೆ ವಹಿಸಿದೆ. ಆ ಕ್ರಮಗಳ ಬಗ್ಗೆ ನೋಡೋದಾದ್ರೆ..
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೌಂಟ್‌ಡೌನ್..!
- 25/03/2024ರಿಂದ 06/04/2024ವರಗೆ ನಡೆಯಲಿರುವ ಪರೀಕ್ಷೆಗಳು
- ಒಟ್ಟು 2,750 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 8.69 ಲಕ್ಷ ವಿಧ್ಯಾರ್ಥಿಗಳು
- ವಿದ್ಯಾರ್ಥಿಗಳು ಒಟ್ಟು ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ
- ಕೇಂದ್ರಗಳ ಸುತ್ತಮುತ್ತ ಪೊಲೀಸ್ ಭದ್ರತೆ, 200 ಮೀಟರ್ ನಿಷೇಧಿತ ಪ್ರದೇಶ
- ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ನಿಷೇಧ
- ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ವಿತರಣೆಗೆ ಸಿದ್ಧತೆ
ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಇದೇ ಮೊದಲ ಸಲ ವೆಬ್‌ಟೆಲಿಕಾಸ್ಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಅಂತಾ ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಅಂದರೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಅಧಿಕಾರಿಗಳ ಕಚೇರಿಗೆ ಕನೆಕ್ಟ್ ಆಗಿರಲಿದೆ. ಆದರೆ ಈ ನಡೆಯ ವಿರುದ್ಧ ಖಾಸಗಿ ಶಾಲೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಆರ್ಥಿಕ ಹೊರೆಯಾಗಲಿದೆ ಅಂತಾ ಹೇಳಿದೆ. ಇದರ ಜೊತೆಗೆ SSLC ಎಕ್ಸಾಂ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಸಿಯೂಟ ನೀಡಲು ಆದೇಶ ಮಾಡಿದೆ.
1 ರಿಂದ 10ನೇ ತರಗತಿ ವರೆಗಿನ ಶಾಲಾ ಮಕ್ಕಳಿಗೆ ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೂ, ಮಧ್ಯಾಹ್ನದ ಬಿಸಿಯೂಟವನ್ನು ಪೂರೈಕೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.ಮಾತ್ರವಲ್ಲದೇ ಶುದ್ಧ ಕುಡಿಯುವ ನೀರು, ಸ್ವಚ್ಛತೆ ಮತ್ತು ನೈರ್ಮಲ್ಯ ಅಂಶಗಳಿಗೆ ಶಾಲಾ ಮುಖ್ಯಸ್ಥರು, ಅಡುಗೆ ಸಿಬ್ಬಂದಿ ,ನಿರ್ವಾಹಕರು, ಆದ್ಯತೆ ನೀಡಿ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಸೂಚಿಸಿದೆ. ಒಟ್ಟಾರೆ ಇಂದಿನಿಂದ ಶುರುವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಕಲ ರೀತಿಯಲ್ಲೂ ತಯಾರಿ ನಡೆಸಿದ್ದು, ಶುಭಾರಂಭ ಮಾಡಲು ಕಾಯ್ತಿದಾರೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್..