ಕುಕ್ಕೆ ಸುಬ್ರಹ್ಮಣ್ಯ ಸಮೀಪ ಶಂಕಿತ ನಕ್ಸಲರು ಪತ್ತೆ..! ಮನೆಗೆ ಭೇಟಿ ನೀಡಿ ಮೊಬೈಲ್ ಚಾರ್ಚ್ ಮಾಡಿರುವ ತಂಡ – ಕಹಳೆ ನ್ಯೂಸ್
ದಕ್ಷಿಣಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ನಿನ್ನೆ ಸಂಜೆ ನಾಲ್ಕೈದು ಜನ ಅಪರಿಚಿತರು ಬಂದು ಹೋಗಿದ್ದು, ನಕ್ಸಲರಿರಬಹುದೇ ಎಂಬ ಗುಮಾನಿ ಈ ಪ್ರದೇಶದಲ್ಲಿ ಹಬ್ಬಿದೆ. ಗ್ರಾಮಸ್ಥರೊಬ್ಬರ ಮನೆಗೆ ಬಂದಿದ್ದ ಅಪರಿಚಿತರು ಸುಮಾರು ಒಂದು ಗಂಟೆಗಳ ಕಾಲ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ.
ಜೊತೆಗೆ ಮೊಬೈಲ್ ಚಾರ್ಚ್ ಮಾಡಿಕೊಂಡು ತೆರಳಿದ್ಧಾರೆ ಎನ್ನಲಾಗಿದೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಶಂಕಿತರ ತಂಡ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿದ್ದರು. ತೋಟದಲ್ಲಿದ್ದ ಕೆಲಸದವರ ಶೆಡ್ಗೆ ಭೇಟಿ ನೀಡಿದ ವೇಳೆ ಕೆಲಸದಾಳು ಶೆಡ್ನ ಬಾಗಿಲು ಹಾಕಿದ್ದು, ಬಳಿಕ ಶಂಕಿತರ ತಂಡ ಅಲ್ಲೇ ಪಕ್ಕದಲ್ಲಿನ ತೋಟದ ಮಾಲಿಕರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಮನೆಯಿಂದ ಎರಡು ಕೆ.ಜಿಯಷ್ಟು ಅಕ್ಕಿ ಪಡೆದು ಬಳಿಕ ತಂಡ ಅಲ್ಲಿಂದ ತೆರಳಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಅವರು ಅರಣ್ಯ ಭಾಗದತ್ತ ತೆರಳಿರುವ ಶಂಕೆ ವ್ಯಕ್ತವಾಗತೊಡಗಿದೆ. ಮೂವರ ತಂಡ ಮನೆಯೊಳಗೆ ಬಂದಿದೆ ಎನ್ನಲಾಗಿದ್ದರೂ, ತಂಡದಲ್ಲಿ ನಾಲ್ಕೈದು ಮಂದಿ ಇರುವ ಶಂಕೆ ಇದೆ. ಮನೆಗೆ ಆಗಮಿಸಿದ ಶಂಕಿತರ ಕೈಯಲ್ಲಿ ಗನ್ ಮಾದರಿ ಇದ್ದಿದ್ದು, ಅದನ್ನು ಬಟ್ಟೆ ಅಥವಾ ಯಾವುದೋ ವಸ್ತುವಿನಿಂದ ಸುತ್ತಿ ಕವರ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶಂಕಿತರು ಮನೆಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಲಾಗಿದ್ದು, ಪೊಲೀಸರು ಅಲ್ಲಿಗೆ ತೆರಳಿ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ.