ಬೆಂಗಳೂರು:ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ : ಶಂಕಿತ ಉಗ್ರನ ನಿವಾಸ ಸೇರಿ, ಚೆನ್ನೈ, ಕನ್ಯಾಕುಮಾರಿ, ಭಟ್ಕಳದಲ್ಲಿ ಎನ್‍ಐಎ ರೈಡ್ – ಕಹಳೆ ನ್ಯೂಸ್
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸ್ಫೋಟ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಭಟ್ಕಳದಲ್ಲಿ ಶಂಕಿತ ಉಗ್ರ ಇಕ್ಬಾಲ್ ಭಟ್ಕಳ್ ಪುತ್ರ ಅಬ್ದುಲ್ ರಬಿ ನಿವಾಸದ ಮೇಲೆ ಸ್ಥಳೀಯ ಪೊಲೀಸರೊಂದಿಗೆ ಬೆಂಗಳೂರಿನ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಂಕಿತ ವ್ಯಕ್ತಿ ಹಾಗೂ ಅಬ್ದುಲ್ ರಬಿ ಹೋಲಿಕೆ ಒಂದೇ ರೀತಿ ಇರುವುದರಿಂದ ದಾಳಿ ನಡೆದಿದೆ ಎನ್ನಲಾಗಿದೆ. ಸದ್ಯ ನಾಳೆ ವಿಚಾರಣೆಗೆ ಹಾಜರಾಗುವಂತೆ ಅಬ್ದುಲ್ ರಬಿಗೆ ಎನ್‍ಐಎ ನೋಟಿಸ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿ 27 ದಿನಗಳು ಕಳೆದಿವೆ. ಬಾಂಬ್ ಸ್ಫೋಟ ನಡೆಸಿದ ಶಂಕಿತರ ಗುರುತು ಪತ್ತೆಯಾದ್ರು, ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ನಡುವೆ ಇಂದು ಎನ್‍ಐಎ ಅಧಿಕಾರಿಗಳು ದೊಡ್ಡ ಆಪರೇಷನ್ ನಡೆಸಿದ್ದು, ಬೆಂಗಳೂರು, ತೀರ್ಥಹಳ್ಳಿ, ಹುಬ್ಬಳ್ಳಿ ಸೇರಿದಂತೆ ಚೆನ್ನೈ, ಕನ್ಯಾಕುಮಾರಿಯಲ್ಲಿ ಹಲವು ಅನುಮಾನಿತ ಸ್ಥಳಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದಾರೆ.
ಐವರ ಮನೆಗಳಲ್ಲಿ ಶೋಧ ಕಾರ್ಯ
ಈ ಹಿಂದೆ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಜ್ ಮುನೀರ್, ಅರಾಫತ್ ಅಲಿ, ಶಾರೀಕ್, ಇಬ್ರಾಜ್ ಸೇರಿದಂತೆ ಐವರ ಮನೆಗಳಲ್ಲಿ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ದಾಳಿಗೊಳಗಾದ ಐವರೂ ಕೂಡ ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿ ನಿವಾಸಿಗಳಾಗಿದ್ದು, ಬೆಂಗಳೂರಿನಿಂದ ತೆರಳಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಶಂಕಿತನಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹ
ರಾಮೇಶ್ವರಂ ಕೆಫೆ ಬ್ಲಾಸ್ಟ್ ಶಂಕಿತ ಆರೋಪಿ ಮುಸಾವೀರ್ ಹುಸೇನ್ ಶಾಝಿಬ್ ಕೂಡ ತೀರ್ಥಹಳ್ಳಿ ನಿವಾಸಿಯಾಗಿದ್ದು, ಶಂಕಿತನಿಗೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಬೆಂಗಳೂರು, ತೀರ್ಥಹಳ್ಳಿ, ಹುಬ್ಬಳ್ಳಿಯಲ್ಲಿ ಕೆಲವು ಅನುಮಾನಿತ ವ್ಯಕ್ತಿಗಳ ಮನೆ ಮೇಲೆ ಎನ್‍ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶಂಕಿತರ ಜೊತೆ ಸಂಪರ್ಕ ಹೊಂದಿದ್ದವರು, ಶಂಕಿತರು ಕೃತ್ಯ ಎಸಗುವುದಕ್ಕೂ ಮುನ್ನ ಓಡಾಡಿದ್ದ ಸ್ಥಳಗಳಲ್ಲಿ ಎನ್‍ಐಎ ಟೀಂ ಪರಿಶೀಲಿಸಿದೆ.
ಚೆನ್ನೈನಲ್ಲಿಯೂ ಎನ್‍ಐಎ ದಾಳಿ
ಶಂಕಿತರು ಬಾಂಬ್ ಬ್ಲಾಸ್ಟ್ ಗೂ ಮುನ್ನ 2 ತಿಂಗಳು ಚೆನ್ನೈನ ಲಾಡ್ಜ್‍ನಲ್ಲಿ ಉಳಿದುಕೊಂಡಿದ್ರಂತೆ ಹಾಗೂ ಚೆನ್ನೈನ ಮಾಲ್‍ವೊಂದರಲ್ಲಿ ಬೇಸ್ ಬಾಲ್ ಕ್ಯಾಪ್ ಖರೀದಿ ಕೂಡ ಮಾಡಿದ್ರಂತೆ. ಹೀಗಾಗಿ ಚೆನ್ನೈ ಹಾಗೂ ಕನ್ಯಾಕುಮಾರಿಯಲ್ಲಿ ಎನ್‍ಐಎ ಅಧಿಕಾರಿಗಳು ಇಂದು ದಾಳಿ ಮಾಡಿ ಹಲವರ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ನಡೆದ ಸ್ಫೋಟ ಪ್ರಕರಣಗಳು ಹಾಗೂ ರಾಮೇಶ್ವರಂ ಕೆಫೆ ಸ್ಫೋಟದ ನಡುವೆ ಸಾಮ್ಯತೆ ಕಂಡು ಬರ್ತಿರೋ ಹಿನ್ನೆಲೆಯಲ್ಲಿ ಹಳೇ ಪ್ರಕರಣಗಳ ಆರೋಪಿಗಳನ್ನ ಎನ್‍ಐಎ ಟೀಂ ವಿಚಾರಣೆ ನಡೆಸಿದೆ.
ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳು, ಡಿಜಿಟಲ್ ಡಿವೈಸ್‍ಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಆ ಮೂಲಕ ಸ್ಫೋಟ ನಡೆಸಿ ತಲೆಮರೆಸಿಕೊಂಡಿರುವ ಶಂಕಿತರಿಗೆ ಎನ್‍ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ರೌಡಿಶೀಟರ್ ಕೊಲೆ
ಬೆಂಗಳೂರಿನಲ್ಲಿ ರೌಡಿ ಶೀಟರ್ ಕಂ ಸುಪಾರಿ ಕಿಲ್ಲರ್ ಬರ್ಬರ ಹತ್ಯೆ ನಡೆದಿದೆ. ರೌಡಿಶೀಟರ್ ದಿನೇಶ್ ಎಂಬಾತನನ್ನು 7 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಮ್ಮನಹಳ್ಳಿ ಓಯೋ ರೂಂ ಬಳಿಯ ಸರ್ವೀಸ್ ಅಪಾರ್ಟ್‍ಮೆಂಟ್‍ನ ಸೋಫಾದಲ್ಲಿ ಕುಳಿತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಬಾಣಸವಾಡಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.