ಯುವಕನೊರ್ವನಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ಪೀಕಿಸಿದ ಪದ್ಮನಾಭ ಸಾಮಂತ : ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲು – ಕಹಳೆ ನ್ಯೂಸ್
ಬಂಟ್ವಾಳ : ಯುವಕನೊರ್ವನಿಗೆ ಸರಕಾರಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ, ಲಕ್ಷಾಂತರ ರೂ ವಂಚಿಸಿದ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ನಡೆದಿದೆ.
ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಎಂಬಾತನಿಗೆ ವಾಮಪದವು ನಿವಾಸಿ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಪದ್ಮನಾಭ ಸಾಮಂತ್ ಎಂಬಾತ ಸರಕಾರಿ ಉದ್ಯೋಗ ದೊರಕಿಸಿ ಕೊಡುವುದಾಗಿ ಹೇಳಿ ಆತನಿಂದ ಲಕ್ಷಾಂತರ ರೂ ಪಡೆದು ವಂಚನೆ ಮಾಡಿದ್ದಾನೆ. ಈ ಕಾರಣಕ್ಕಾಗಿ ಪದ್ಮನಾಭ ಸಾಮಂತ್ ನ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ವಂಚನೆ?
ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಎಂಬಾತ ಬಡತನದ ಕುಟುಂಬದ ಯುವಕನಾಗಿದ್ದು, ಮಂಗಳೂರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಈತನಿಗೆ, ಸರಕಾರಿ ಉದ್ಯೋಗದ ಕನಸು ಹೊಂದಿದ್ದ.
ಈ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಪರಿಚಯಸ್ಥನಾಗಿದ್ದ ಪದ್ಮನಾಭ ಸಾಮಂತ ಎಂಬಾತ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದು ಬೆಂಗಳೂರಿನ ಕಾವೇರಿ ಭವನದಲ್ಲಿರುವ ನೀರಾವರಿ ನಿಗಮದಲ್ಲಿ ಗುಮಾಸ್ತ ಉದ್ಯೋಗ ತೆಗಿಸಿಕೊಡುವ ಭರವಸೆ ನೀಡಿದ್ದ.
ಸರಕಾರಿ ಉದ್ಯೋಗ ತೆಗೆಸಿಕೊಡುವುದಕ್ಕೆ 2 ಲಕ್ಷ ಹಣವನ್ನು ನೀಡುವಂತೆ ತಿಳಿಸಿದ್ದಲ್ಲದೆ, ನಂಬಿಕೆಯನ್ನು ಮೂಡಿಸಲು ನೀರಾವರಿ ನಿಗಮದ ಹೆಸರಿನಲ್ಲಿ ಛಾಪ ಕಾಗದವನ್ನು ತೆಗೆದ ಈತ ಉದ್ಯೋಗ ಸಿಕ್ಕಿದ ಮೇಲೆ ತಂದೆತಾಯಿಗೆ ಇ.ಎಸ್.ಐ.ಸೌಲಭ್ಯಕ್ಕಾಗಿ ಇಬ್ಬರ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿಯನ್ನು ಹಾಗೂ ಕಾರ್ತಿಕ್ ನ ಬ್ಯಾಂಕ್ ಜೆರಾಕ್ಸ್ ಪಾಸ್ ಪುಸ್ತಕವನ್ನು ಪಡೆದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ನಿಗಮದ ಎಂ.ಡಿ.ಅವರಿಗೆ ಹಣ ನೀಡುವ ನೆಪದಲ್ಲಿ ಹಂತಹಂತವಾಗಿ ರೂ. 1,51,750 ಲಕ್ಷ ರೂ ನ್ನು ಪಡೆದುಕೊಂಡಿದ್ದ. ಆದರೆ ಕೆಲಸ ಸಿಗುವುದು ಕಂಡುಬರದ ಹಿನ್ನೆಲೆಯಲ್ಲಿ ವಿಚಾರಸಿದಾಗ ಇನ್ನು ಒಂದು ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದ. ಇದರಿಂದ ಸಂಶಯಗೊಂಡ ಕಾರ್ತಿಕ್ ಬೆಂಗಳೂರಿನ ಕಾವೇರಿ ನಿಗಮದಲ್ಲಿರುವ ನೀರಾವರಿ ಇಲಾಖೆಯನ್ನು ವಿಚಾರಿಸಿದಾಗ ಅಲ್ಲಿ ಯಾವುದೇ ಉದ್ಯೋಗದ ಅವಕಾಶ ಇಲ್ಲದಿರುವುದು ಮತ್ತು ಈತನ ಅರ್ಜಿಗಳು ಹೋಗದರಿರುವುದು ಖಾತ್ರಿಯಾಯಿತು. ಅಲ್ಲಿಗೆ ಈತ ಹಣ ನೀಡಿ ವಂಚನೆಗೊಳಗಾದ ವಿಚಾರ ಬಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದ. ಇದೀಗ ವಂಚನೆಗೊಳಗಾದ ಯುವಕ ಕಾರ್ತಿಕ್ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಕಾರ್ತಿಕ್ ಗೆ ಕಳೆದ ಏಳು ವರ್ಷಗಳಿಂದ ಪರಿಚಯಸ್ಥನಾಗಿದ್ದ ಸಾಮಂತ, ತನಗೆ ರಾಜಕೀಯ ವ್ಯಕ್ತಿಗಳ ಹಾಗೂ ಅಧಿಕಾರಿಗಳ ಜೊತೆ ಸಂಪರ್ಕವಿರುವುದಾಗಿ ನಂಬಿಸಿದ್ದ.
ಅಲ್ಲದೆ ಈತನ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವ್ಯಕ್ತಿಗಳ ಜೊತೆ ನಿಂತಿರುವ ಪೋಟೋ ಹಂಚಿಕೊಂಡಿದ್ದ ,ಇದನ್ನು ಕಂಡಿದ್ದ ಕಾರ್ತಿಕ್ ಈತನ ಮಾತನ್ನು ನಂಬಿ ಮೋಸಹೋಗಿರುವುದಾಗಿ ತಿಳಿಸಿದ್ದಾನೆ.