Recent Posts

Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಲೋಕಸಭಾ ಚುನಾವಣೆ ; ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿ – ಕಹಳೆ ನ್ಯೂಸ್

ಮಂಗಳೂರು, ಮಾ 28: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮಾ.28ರಿಂದ ಏ.8ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಆದೇಶ ಹೊರಡಿಸಿದ್ದಾರೆ. ಮಾ.28ರಿಂದ ಏ.8ರವರೆಗೆ, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏ. 4ರಂದು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಏ. 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಇನ್ನು ಏ. 6ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ನಿಷೇಧಿತ 100 ಮೀ.ಪರಿಧಿಯಲ್ಲಿ ಅಭ್ಯರ್ಥಿಯ ವಾಹನ ಸೇರಿ, ಗರಿಷ್ಟ ಮೂರು ವಾಹನಗಳಿಗೆ ಮಾತ್ರ ಕಚೇರಿ ಆವರಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಯನ್ನು ಒಳಗೊಂಡಂತೆ ಗರಿಷ್ಠ 5 ಮಂದಿಗೆ ಮಾತ್ರ ಕಚೇರಿ ಆವರಣ ಪ್ರವೇಶಿಸಲು ಅನುಮತಿ ನೀಡಲಾಗಿದ್ದು, 5ಕ್ಕಿಂತ ಹೆಚ್ಚು ಮಂದಿ ಗುಂಪುಗಾರಿಕೆ ನಡೆಸುವುದು, ಆಯುಧ ಶಸ್ತ್ರಾಸ್ತ್ರಗಳು ಮತ್ತು ಮಾರಕಾಸ್ತ್ರಗಳೊಂದಿಗೆ ಓಡಾಡುವುದನ್ನು ನಿಷೇಧಿಸಲಾಗಿದೆ.

ಇನ್ನು ನಿಷೇಧಿತ ಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಅಭ್ಯರ್ಥಿಗಳು, ಅನುಮತಿ ಹೊಂದಿದ ರಕ್ಷಣೆ ಇಲಾಖೆಯವರು ಮತ್ತು ಅನುಮತಿ ಪಡೆದ ಮಾಧ್ಯಮದವರನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಜೊತೆಗೆ ಯಾವುದೇ ರೀತಿಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದು ಹಾಗೂ ಶಾಂತಿ, ಶಿಸ್ತು ಪಾಲನೆಗೆ ಭಂಗ ತರುವಂತೆ ವರ್ತಿಸುವುದು, ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡುವುದು ಅಥವಾ ನಷ್ಟಗೊಳಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.