Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಜನಸಂಪರ್ಕ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ಲೋಕಾಯುಕ್ತ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಜನಸಂಪರ್ಕ ಸಭೆ ಬಿಸಿರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತ ಡಿ.ವೈ.ಎಸ್.ಪಿ. ಗಾನ ಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಲೋಕಾಯುಕ್ತ ಇನ್ಸ್ ಪೆಕ್ಟರ್ ಎಂದು ಹೇಳಿ ಅಧಿಕಾರಿಗಳಿಗೆ ಪೋನ್ ಮಾಡಿ ಹಣ ನೀಡುವಂತೆ ಒತ್ತಾಯ ಮಾಡುವ ಜಾಲವೊಂದು ಕಾರ್ಯಚರಿಸುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದ್ದು,ಉಳ್ಳಾಲದಲ್ಲಿ ಇಂತಹ ಪ್ರಕರಣವೊಂದು ನಡೆದು ಅವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ರೀತಿ ಬೇರೆ ತಾಲೂಕಿನಲ್ಲಿ ಲೋಕಾಯುಕ್ತರ ಹೆಸರಿನಲ್ಲಿ ನಕಲಿ ಪೋನ್ ಕರೆಗಳು ಬಂದು ಲಂಚಕ್ಕೆ ಬೇಡಿಕೆಯಿಟ್ಟರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು .ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂ ನ ಮುಂಭಾಗದಲ್ಲಿ ಅಂದರೆ ನೇತ್ರಾವತಿ ನದಿಯಲ್ಲಿ ಮರಳು ತುಂಬಿದ್ದು, ಮಳೆಗಾಲದಲ್ಲಿ ಇದರ ಪರಿಣಾಮವಾಗಿ ಡ್ಯಾಂ ನ ಅಕ್ಕಪಕ್ಕದ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರವಾಗಿ ಕೃಷಿ ನಷ್ಟವಾಗುತ್ತದೆ.

ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಡ್ಯಾಂ ನ ಪಕ್ಕದಲ್ಲಿ ತುಂಬಿರುವ ಮರಳನ್ನು ಹೂಳೆತ್ತುವ ಕಾರ್ಯ ಇಲಾಖೆ ಮಾಡಬೇಕು, ಅಮೂಲಕ ಕೃಷಿಕರ ಕೃಷಿಯನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ರೈತ ಸಂಘದ ಹೋರಾಟಗಾರ ಸುಬ್ರಹ್ಮಣ್ಯ ಭಟ್ ಅವರ ಮನವಿಯನ್ನು ಲೋಕಾಯುಕ್ತ ಅಧಿಕಾರಿಗಳಲ್ಲಿ ಮಾಡಿದ್ದರು ಎಂದು ತಹಶಿಲ್ದಾರ್ ಅರ್ಚನಾ ಭಟ್ ಅವರಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಅಮಾನುಲ್ಲ ಅವರು ತಿಳಿಸಿದರು.

ತಹಶಿಲ್ದಾರ್ ಅರ್ಚನಾ ಭಟ್ ಇದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಆಗಬೇಕಾದ ಕಾರ್ಯವಾಗಿದ್ದು, ಡ್ಯಾಂ ನ ನಿರ್ವಹಣೆ ಮಾಡುವ ಮಂಗಳೂರು ಮಹಾನಗರ ಪಾಲಿಕೆ ಇದರ ಜವಬ್ದಾರಿಯಾಗಿದೆ.ಹಾಗಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪಾಣೆಮಂಗಳೂರು ನಿವಾಸಿ ಸುದೇಶ್ ಮಯ್ಯ ಅವರಿಗೆ ಸೇರಿದ ಮನೆಯೊಂದರ ಬಾಬ್ತು ಕಟ್ಟಲಾದ ತೆರಿಗೆಗೆ ಅಧಿಕೃತವಾದ ರಶೀಧಿಯನ್ನು ಪುರಸಭೆ ನೀಡದೆ ಸತಾಯಿಸುತ್ತಿರುವುದರ ಬಗ್ಗೆ ಲೋಕಾಯುಕ್ತಕ್ಕೆ ನೀಡಿದ ದೂರಿಗೆ ಸಂಬಂಧಿಸಿದಂತೆ ದೂರುದಾರರಿಗೆ ತೊಂದರೆ ನೀಡಿದೆ ಒಂದು ಗಂಟೆಯೊಳಗೆ ರಶೀಧಿ ನೀಡುವಂತೆ ಅಧಿಕಾರಿ ಸೂಚಿಸಿದರು.

ಪುರಸಭಾ ವ್ಯಾಪ್ತಿಯ ಮಯ್ಯರಬೈಲು ಎಂಬಲ್ಲಿ ಪರವಾನಿಗೆ ಇಲ್ಲದ ಅಕ್ರಮವಾದ ವಾಣಿಜ್ಯ ಕಟ್ಟಡವೊಂದು ನಿರ್ಮಾಣವಾಗಿದ್ದಲ್ಲದೆ, ವ್ಯಹಾರ ನಡೆಸುವ ಬಗ್ಗೆ ಶ್ಯಾಮಸುಂದರ ರಾವ್ ದೂರು ನೀಡಿದ್ದು, ಈ ಬಗ್ಗೆ ಪುರಸಭೆ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಪುರಸಭಾ ಇಲಾಖೆಯ ವ್ಯಾಪ್ತಿಗೆ ಒಳಪಟ್ಟು ಕಾರ್ಯಚರಿಸುತ್ತಿರುವ ಬಿಸಿರೋಡಿನ ಖಾಸಗಿಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕೋಣೆಯೊಂದನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಗಂಗಾಧರ್ ಅವರಿಗೆ ನೀಡುವಂತೆ ನೀಡಿದ ಅರ್ಜಿಗೆ ಸ್ಪಂದನೆ ನೀಡಿಲ್ಲ.ಮತ್ತು ಅರ್ಜಿ ದಾರರ ಗಮನಕ್ಕೆ ತರದೆ ಟೆಂಡರ್ ಮಾಡಲಾಗಿದೆ ಎಂಬ ದೂರನ್ನು ಲೋಕಾಯುಕ್ತಕ್ಕೆ ನೀಡಿದ್ದಾರೆ.

ಈ ದೂರಿಗೆ ಸಂಬಂಧಿಸಿದಂತೆ ಪುರಸಭೆಯ ಇಂಜಿನಿಯರ್ ಡಿಮೋನಿಕ್ ಡಿಮೆಲ್ಲೋ ಅವರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ
40 ವರ್ಷವಾದರೂ ವರ್ಗಾವಣೆಯಾಗದೆ ಬಂಟ್ವಾಳ ಪುರಸಭೆಯಲ್ಲಿ ಬೀಡುಬಿಟ್ಟಿರುವ ಪುರಸಭಾ ಇಂಜಿನಿಯರ್ ಅವರ ಬಗ್ಗೆ ದೂರುದಾರ ಗಂಗಾಧರ್ ಅವರು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದರು.

ಒಟ್ಟು 8 ದೂರು ಅರ್ಜಿಗಳು ಜನಸಂಪರ್ಕ ಸಭೆಗೆ ಬಂದಿದ್ದು, ಎಲ್ಲಾ ಅರ್ಜಿದಾರರಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ತಹಶಿಲ್ದಾರ್ ಅರ್ಚನಾ ಭಟ್
ಇನ್ಸ್ ಪೆಕ್ಟರ್ ಗಳಾದ ಅಮಾನುಲ್ಲ ಎ, ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್ ಸಿ.ಎಲ್, ಸಿಬ್ಬಂದಿಗಳಾದ ಮಹೇಶ್, ಬಾಲರಾಜ್, ಗಂಗಣ್ಣ, ರುದ್ರೇಗೌಡ, ಪಂಪಣ್ಣ, ಇ.ಒ.ರಾಹುಲ್ ಕಾಂಬ್ಳೆ ಉಪಸ್ಥಿತರಿದ್ದರು.