ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣಾ ಪ್ರಚಾರಕ್ಕಾಗಿ ಕೂಡ್ಲಿಗಿಗೆ ಡಿ ಕೆ ಶಿವಕುಮಾರ್ ಬರುತ್ತಿದ್ದಂತೆಯೇ, ರಮೇಶ್ ಜಾರಕಿಹೊಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಇದರಿಂದ, ಡಿಕೆಶಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಮುಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬೆಳಗಾವಿ ರಾಜಕಾರಣದಲ್ಲಿನ ಹಸ್ತಕ್ಷೇಪ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಮನಸ್ತಾಪ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಬುಡವನ್ನೇ ಅಲುಗಾಡಿಸಿತ್ತು.
ರಮೇಶ್ ಜಾರಕಿಹೊಳಿಯನ್ನು ಕರೆಸಿ ವರಿಷ್ಠರು ಮಾತುಕತೆ ನಡೆಸಿ ಸಮಾಧಾನ ಪಡಿಸಿದ್ದರೂ, ಡಿಕೆಶಿ ಜೊತೆಗಿನ ಇವರ ಅಸಮಾಧಾನದ ಹೊಗೆ ಅಲ್ಲಲ್ಲಿ ಬಹಿರಂಗವಾಗುತ್ತಲೇ ಬರುತ್ತಿವೆ. ಅದಕ್ಕೆ ಕೂಡ್ಲಿಗೆ ಘಟನೆ ಸೇರ್ಪಡೆಯಾಗುವ ಮೂಲಕ, ಕಾಂಗ್ರೆಸ್ಸಿಗೆ ಮತ್ತೊಂದು ತಲೆನೋವು ತಂದೊಡ್ಡಿದೆ.