ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶ : ನಟಿ ಮಾಳವಿಕಾ ಅವಿನಾಶ್ ಸೇರಿದಂತೆ ಅನೇಕ ಗಣ್ಯರು ಭಾಗಿ – ಕಹಳೆ ನ್ಯೂಸ್
ಬಂಟ್ವಾಳ: ನಾರಿ ಶಕ್ತಿ ಸಶಕ್ತರಾಗಬೇಕು ಎಂಬುದು ಮಹತ್ವದ ಕನಸು ಮತ್ತು ಪರಿಕಲ್ಪನೆಯಾಗಿದ್ದು, ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಣ ಮಾಡಿದ ಪಕ್ಷ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ ಅವಧಿಯಲ್ಲಿ ಮಹಿಳೆಯರ ಏಳಿಗೆಗಾಗಿ ಸರಕಾರ ನೀಡಿದ ಯೋಜನೆಗಳು ಅನನ್ಯವಾಗಿದೆ ಎಂದು ರಾಜ್ಯದ ಬಿಜೆಪಿ ಉಪಾಧ್ಯಕ್ಷೆ,ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ತಿಳಿಸಿದರು.
ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ, ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಬಹಳಷ್ಟು ತೀಕ್ಷ್ಣ ಬುದ್ದಿಯುಳ್ಳರಾಗಿದ್ದು, ಶಕ್ತಿಯುತರಾಗಿದ್ದಾರೆ. ಬಿಜೆಪಿಯ ನಾರಿಶಕ್ತಿಯನ್ನು ಕಂಡು ರಾಹುಲ್ ಗಾಂಧಿಗೆ ಹೆದರಿಕೆಯಾಗಿದೆ. ಕಾಂಗ್ರೆಸ್ ನಾಯಕರಲ್ಲಿ ಮೌಡ್ಯವಿದೆ, ಚುನಾವಣೆ ನಡೆಯುತ್ತಿರುವುದು ಲೋಕಸಭಾ ಚುನಾವಣೆ ಮೋದಿಯವರ ಗೆಲುವು ನಿಶ್ಚಿತವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನ ದುರಾಡಳಿತದಲ್ಲಿದ್ದ ಭಾರತಕ್ಕೆ ನರೇಂದ್ರ ಮೋದಿಯವರು ನಾಯಕನಾಗಿ ಬಂದ ಬಳಿಕ ಅಭಿವೃದ್ಧಿ ಮತ್ತು ವಿಶ್ವದಲ್ಲೇ ಅತ್ಯಂತ ಪ್ರಬಲ ರಾಷ್ಟ್ರವಾಗಿ ಭಾರತ ಬೆಳೆಯಿತು ಎಂದು ತಿಳಿಸಿದರು.
140 ಕೋಟಿ ಜನರ ಬದುಕನ್ನು ನರೇಂದ್ರ ಮೋದಿಯವರು ಒಂದಲ್ಲ ಒಂದು ದೃಷ್ಟಿಯಿಂದ ಸ್ಪರ್ಶ ಮಾಡಿದ್ದಾರೆ. ಮಹಿಳೆಯರಿಗಾಗಿ ಕಾಯ್ದೆಯನ್ನು ತರಲು ಸಿದ್ದರಾಗಿದ್ದಾರೆ ಎಂದು ತಿಳಿಸಿದರು.
ದ.ಕ.ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರ ಉತ್ಸಾಹ ನೋಡಿದಾಗ ಗೆಲುವು ಸಾಧಿಸಿಯಾಗಿದೆ ಎಂಬ ಭಾವನೆ ಬರುತ್ತದೆ.ಮೋದಿಯವರ ಕೈ ಬಲಪಡಿಸುವುದು ಕರ್ತವ್ಯ ಮತ್ತು ಧರ್ಮವಾಗಿದೆ. ಬ್ರಿಜೇಶ್ ನನಗೆ ತಮ್ಮ ಇದ್ದಾಗೆ, ದೇಶವನ್ನು ರಕ್ಷಣೆ ಮಾಡುವ ಸೈನಿಕನಾಗಿ, ಜಿಲ್ಲೆಯ ಅಭಿವೃದ್ಧಿಗಾಗಿ ಅವರನ್ನು ಹೆಚ್ಚಿನ ಅಂತರದ ಮತಗಳನ್ನು ನೀಡಿ ಲೋಕಸಭೆಗೆ ಪ್ರತಿನಿಧಿಯಾಗಿ ಕಳುಹಿಸಬೇಕು ಎಂದು ಮನವಿ ಮಾಡಿದರು. ದ.ಕ.ಜಿಲ್ಲೆಯಲ್ಲಿ ಕೇಸರಿ ಪಡೆ ಗರ್ಜನೆ ಮಾಡಿದರೆ ಇಡೀ ರಾಜ್ಯದಲ್ಲಿ ಕೇಸರಿ ಶಕ್ತಿ ಸಂಚಲನವನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಮನೆ ಮತ್ತು ಮನ ಪರಿವರ್ತಿಸಿ ಬಿಜೆಪಿಗೆ ಮತನೀಡುವಂತೆ ಪರಿವರ್ತನೆ ಮಾಡುವ ಬಹಳ ದೊಡ್ಡ ಶಕ್ತಿ ಮಹಿಳೆಯರಿಗಿದ್ದು, ನಾರಿಯರು ಚುನಾವಣೆವರೆಗೆ ವಿರಮಿಸದೆ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು. ಗ್ರಾಮಗಳಿಗೆ ಬೇಟಿ ನೀಡಿದಾಗ ಮತದಾರರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಲೋಕ ಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಗೆಲುವು ನಿಶ್ಚಿತವಾಗಿದೆ.
ಜಗತ್ತಿನಲ್ಲಿ ಭಾರತವನ್ನು ಬದಲಾವಣೆಯ ರಾಷ್ಟ್ರವಾಗಿ ಮಾರ್ಪಾಡು ಮಾಡುವ ಉದ್ದೇಶದಿಂದ 400 ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಈಬಾರಿಯ ಚುನಾವಣಾ ಫಲಿತಾಂಶವನ್ನು ಇಡೀ ಜಗತ್ತು ಎದುರುನೋಡುತ್ತಿದೆ. ಮಂಗಳೂರಿಗೆ ಮೋದಿಯವರ ಚುನಾವಣಾ ಪ್ರಚಾರ ಸಭೆಗೆ ಆಗಮಿಸಲಿದ್ದು, ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಮಹಿಳೆಯರು ಭಾಗಿಯಾಗಿ ಮಹಿಳಾ ಶಕ್ತಿಯನ್ನು ಪ್ರದರ್ಶನ ಮಾಡುವಂತೆ ಮನವಿ ಮಾಡಿದರು.
ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಹಾಕಿರುವ ಅಡಿಪಾಯದ ಮೇಲೆ ಸೌಧವನ್ನು ಕಟ್ಟುವ ಚುನಾವಣೆ ಇದಾಗಿದೆ.
ಪ್ರಾಮಾಣಿಕವಾಗಿ ಮಹಿಳೆಯರ ಕಷ್ಟದ ಬಗ್ಗೆ ಅರ್ಥ ಮಾಡಿಕೊಂಡು ಸ್ಪಂದನೆ ನೀಡಿದ ಏಕೈಕ ಪ್ರಧಾನಿ ನರೇಂದ್ರ ಮೋದಿಯವರು ಎಂದು ತಿಳಿಸಿದರು.
ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ತಿಳಿಸಿದರು. ಬಡವರ ಬಗ್ಗೆ, ರೈತರ ಮತ್ತು ಮಹಿಳೆಯರ ಬಗ್ಗೆ ಸದಾ ಯೋಚನೆ ಮೂಲಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಹಿಂದುತ್ವಕ್ಕೆ ಬದ್ದತೆ, ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂಬ ವಿಶ್ವಾಸದ ಮಾತಿಗೆ ನಾರಿಶಕ್ತಿ ಸಮಾವೇಶ ಶಕ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದ.ಕ.ಜಿಲ್ಲೆ ಹಿಂದುತ್ವದ ಭದ್ರಕೋಟೆ ಎಂಬುದು ಯಾರಿಗೆಲ್ಲ ಸಂಶಯವಿದೆಯೋ ಅವರಿಗೆ ಸ್ಪಷ್ಟಪಡಿಸುವ ಕೆಲಸ ನಾರಿಯರು ಮಾಡಬೇಕು ಎಂಬುದು ನನ್ನ ಕಳಕಳಿಯ ವಿನಂತಿಯಾಗಿದೆ.
ನವಶಕ್ತಿ ಎಂಬ ರೀತಿಯಲ್ಲಿ ಒಂಬತ್ತು ಮಹಿಳೆಯರು ಪ್ರತಿ ಬೂತ್ ನಲ್ಲಿ ಪ್ರಥಮವಾಗಿ ಮೋದಿಯವರಿಗೆ ಮತದಾನ ಮಾಡಿ ಎಂದು ಮನವಿ ಮಾಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಜನಸಂಘದಿಂದ ಬೆಳೆದು ಬಂದ ಬಿಜೆಪಿ ಶಕ್ತಿಯುತವಾದ ಪಕ್ಷವಾಗಿ ಬೆಳೆದಿದೆ. ಇಂತಹ ಸಮಯದಲ್ಲಿ ಪಕ್ಷವನ್ನು ಬಲಪಡಿಸುವುದರ ಜೊತೆಗೆ ಪ್ರಧಾನಿ ಮೋದಿಯವರ ಅಧಿಕಾರದ ಅವಧಿಯಲ್ಲಿ ಜಾರಿಯಾದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ನಮ್ಮಿಂದ ಆಗಬೇಕಾಗಿದೆ ಎಂದು ತಿಳಿಸಿದರು.
ಮಹಿಳಾ ಮೋರ್ಚಾ ಬಂಟ್ವಾಳ ಮಂಡಲದ ಅಧ್ಯಕ್ಷೆ ಭಾರತಿ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್ , ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಬಂಟ್ವಾಳ ಚುನಾವಣಾ ಪ್ರಭಾರಿ ಜಗದೀಶ್ ಶೇಣವ, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಜಿಲ್ಲೆಯ ಮಾಜಿ ಕಾರ್ಯದರ್ಶಿ ಕಸ್ತೂರಿ ಪಂಜ,ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ,ಪುತ್ತೂರು ಪ್ರಭಾರಿ ಸುಲೋಚನ ಜಿ.ಕೆಭಟ್, ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಧನಲಕ್ಮೀ ಗಟ್ಟಿ, ಗುಣವತಿ ಕೊಲ್ಲತ್ತಡ್ಕ,ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಖಿತಾ ಆರ್ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ ಸ್ವಾಗತಿಸಿದರು. ಹಿರಣ್ಮಯಿ ಧನ್ಯವಾದ ನೀಡಿದರು.ಮಣಿಮಾಲ ಬಿ.ಶೆಟ್ಟಿ ಹಾಗೂ ಸೀಮಾಮಾದವ ಕಾರ್ಯಕ್ರಮ ನಿರೂಪಿಸಿದರು