ಮಂಗಳೂರು ಅಡ್ಯಾರ್ ನ ಬೊಂಡ ಫ್ಯಾಕ್ಟರಿ ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥೆಯಲ್ಲಿ ಎಳನೀರು ಕುಡಿದು ಸುಮಾರು 15 ಮಂದಿ ಅಸ್ವಸ್ಥ ; ಆರೋಗ್ಯಾಧಿಕಾರಿಗಳು ಭೇಟಿ – ಕಹಳೆ ನ್ಯೂಸ್
ಮಂಗಳೂರು, ಏ 11:ಎಳನೀರು ಕುಡಿದು ಸುಮಾರು 15 ಮಂದಿ ಸಾರ್ವಜನಿಕರು ಅಸ್ವಸ್ಥಗೊಂಡ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಅಡ್ಯಾರ್ ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಏ.8 ಸೋಮವಾರದಂದು ಅಡ್ಯಾರ್ ಕಣ್ಣೂರು ಮತ್ತು ತುಂಬೆ ಪರಿಸರದ ನಿವಾಸಿಗಳು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿದ್ದಾರೆ. ಎಳನೀರು ಕುಡಿದ ಬಳಿಕ ಏ 9 ರಂದು ಬೆಳಗ್ಗೆಯಿಂದ ಸಂಜೆಯ ತನಕ ಅಡ್ಯಾರ್ ಕಣ್ಣೂರು, ತುಂಬೆ ನಿವಾಸಿಗಳು ವಾಂತಿ ಮತ್ತು ಭೇದಿಯಿಂದ ಬಳಲಿದ್ದಾರೆ.
ಸದ್ಯ ಅಸ್ವಸ್ಥಗೊಂಡ ಮೂವರಿಗೆ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 12 ಮಂದಿ ಹೊರರೋಗಿಗಳಾಗಿ ಔಷಧಿ ಪಡೆದಿದ್ದಾರೆ. ಬುಧವಾರದಂದು ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಇವರಿಗೆ ವಾಟ್ಸಪ್ ಮುಖಾಂತರ ದೂರು ಸಲ್ಲಿಕೆಯಾಗಿದ್ದು ತಕ್ಷಣವೇ ಅಡ್ಯಾರ್ ನಲ್ಲಿರುವ ಬೊಂಡ ಫ್ಯಾಕ್ಟರಿ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಡೀ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಶುಚಿಗೊಳಿಸಲಾಗಿದೆ
ಎಳನೀರಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ. ಅಲ್ಲದೇ ಜನ ಆತಂಕಕ್ಕೆ ಒಳಗಾಗದಂತೆ ಆರೋಗ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿ, ಆಹಾರ ಸುರಕ್ಷತಾ ಅಂಕಿತ ಅಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ ಇವರ ತಂಡ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ.